ಪಾಲ್ಘರ್ (ಮಹಾರಾಷ್ಟ್ರ): ತಾಯಿ ಯಾರೊಂದಿಗೋ ಸಂಬಂಧ ಬೆಳೆಸಿಕೊಂಡಿದ್ದಾಳೆ ಎಂದು ಅನುಮಾನಿಸಿದ ಪುತ್ರ, ಹೆತ್ತಮ್ಮನನ್ನೇ ಹರಿತವಾದ ಆಯುಧದಿಂದ ಇರಿದು ಕೊಂದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಈ ಬಗ್ಗೆ ಮಾಂಡವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ಯೆಯಾದ ತಾಯಿ ಮತ್ತು ಹಂತಕ ಪುತ್ರ ಪಾಲ್ಘರ್ ಜಿಲ್ಲೆಯ ವಸಾಯಿ ನಗರದ ನಿವಾಸಿಯಾಗಿದ್ದರು. ಭಾನುವಾರ ರಾತ್ರಿ ಊಟ ಮಾಡುವ ವೇಳೆ ಪುತ್ರನ ಮೊಬೈಲ್ನಿಂದ ತಾಯಿ ಯಾರಿಗೋ ಮೆಸೇಜ್ ಮಾಡಿದ್ದಾಳೆ. ಇದನ್ನು ಕಂಡ ಪುತ್ರ ಕ್ರೋಧಗೊಂಡು, ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನಿಸಿ ಆಕೆಯ ಜೊತೆಗೆ ಜಗಳವಾಡಿದ್ದಾನೆ.
ಇಬ್ಬರ ಮಧ್ಯೆ ವಾಗ್ವಾದ ನಡೆದು ಕೋಪದಲ್ಲಿ ಪುತ್ರ ಮನೆಯಲ್ಲಿದ್ದ ಆಯುಧದಿಂದ ತಾಯಿ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾಳೆ. ಘಟನೆಯ ವೇಳೆ ಕುಟುಂಬದ ಇತರ ಸದಸ್ಯರು ಮನೆಯಲ್ಲಿ ಇರಲಿಲ್ಲ. ಇದನ್ನು ನೆರೆಹೊರೆಯವರು ಮಹಿಳೆಯನ್ನು ತಕ್ಷಣವೇ ಭಿವಂಡಿಯ ಇಂದಿರಾಗಾಂಧಿ ಸ್ಮಾರಕ ಆಸ್ಪತ್ರೆಗೆ ಸಾಗಿಸಲಾಯಿತು.
ಆದರೆ, ತೀವ್ರ ರಕ್ತಸ್ರಾವದಿಂದ ಮಹಿಳೆ ಅಸುನೀಗಿದ್ದಾಗಿ ವೈದ್ಯರು ತಿಳಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಪುತ್ರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆಗಾಗ ಇಬ್ಬರ ಮಧ್ಯೆ ಜಗಳ : ಮಹಿಳೆ, ಪುತ್ರನ ಮೊಬೈಲ್ನಿಂದ ಅಪರಿಚಿತ ವ್ಯಕ್ತಿಗೆ ಮೆಸೇಜ್ ಮಾಡುತ್ತಿದ್ದರ ಬಗ್ಗೆ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಇದನ್ನು ಪುತ್ರ ಹಲವು ಬಾರಿ ವಿರೋಧಿಸಿ ತಾಯಿಯನ್ನು ನಿಂದಿಸಿದ್ದ. ಆದರೂ, ಮಹಿಳೆ ಮೆಸೇಜ್ ಮಾಡುವುದನ್ನು ಮುಂದುವರಿಸಿದ್ದಳು. ಭಾನುವಾರ ಅದು ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.
ತಾಯಿಯನ್ನು ಪುತ್ರನೇ ಕೊಲೆ ಮಾಡಿದ್ದಾಗಿ ಮಾಹಿತಿ ಬಂದ ಬಳಿಕ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಲಾಗಿದೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಾಲಕನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಶೀಲ ಶಂಕಿಸಿ ಪತ್ನಿಯ ಹತ್ಯೆ : ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಪತಿರಾಯನೊಬ್ಬ ಪೊಲೀಸ್ ಠಾಣೆಗೆ ಹೋಗಿ ತಾನೇ ಶರಣಾಗಿದ್ದ ಘಟನೆ ಮೈಸೂರಿನಲ್ಲಿ ಇತ್ತೀಚೆಗೆ ನಡೆದಿತ್ತು. ನಗರದ ಕೆಎಸ್‌ಆರ್‌ಟಿಸಿ ಲೇಔಟ್ ನಿವಾಸಿ ಲೋಕೇಶ್ ಆರಾಧ್ಯ ಆರೋಪಿ, ಪತ್ನಿ ಪಲ್ಲವಿ ಹತ್ಯೆಯಾದ ಮಹಿಳೆ.
9 ವರ್ಷಗಳ ಹಿಂದೆ ಮದುವೆಯಾಗಿದ್ದ ಲೋಕೇಶ್ ಮತ್ತು ಪಲ್ಲವಿಗೆ 7 ವರ್ಷದ ಪುತ್ರನಿದ್ದಾನೆ. ಆರೋಪಿ ಪತಿ ಲೋಕೇಶ್ ಆಗಾಗ್ಗೆ ಹೆಂಡತಿಯ ಶೀಲವನ್ನು ಶಂಕಿಸಿ ಜಗಳ ಮಾಡುತ್ತಿದ್ದ. ಹಲವು ಬಾರಿ ಕುಟುಂಬಸ್ಥರು ಸಂಧಾನ ನಡೆಸಿ ಜಗಳವನ್ನು ತಣಿಸಿದ್ದರು. ಆದರೆ, ಜೂನ್ 15 ರಂದು ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ. ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: ಮೈಸೂರು: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ