ಫಿರೋಜಾಬಾದ್ (ಉತ್ತರ ಪ್ರದೇಶ): ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ವ್ಯಕ್ತಿಯೋರ್ವ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ವಿದ್ಯುತ್ ಶಾಕ್‌ನಿಂದ ಪತ್ನಿ ಆಕಸ್ಮಿಕವಾಗಿ ಮೃತಪಟ್ಟಿದ್ದಾಳೆ ಎಂದು ಆರೋಪಿ ಬಿಂಬಿಸಲು ಯತ್ನಿಸಿದ್ದಾನೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿನ ಸತ್ಯಾಂಶ ಹೊರಬಿದ್ದಿದ್ದು, ಹಂತಕ ಜೈಲು ಪಾಲಾಗಿದ್ದಾನೆ.
ಹಂತಕ ಪತಿ ಚಾರ್ಟರ್ಡ್ ಅಕೌಂಟೆಂಟ್: ಉದಯ್ ಪ್ರತಾಪ್ ಸಿಂಗ್ ಬಂಧಿತ ಆರೋಪಿ. ಮಮತಾ ಪತಿಯಿಂದ ಕೊಲೆಯಾದವರು. ಆರೋಪಿ ಉದಯ್ ಇಟಾವದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ಈ ಮೊದಲೇ ಒಂದು ಮದುವೆಯಾಗಿತ್ತು. ಆದರೆ, ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡು ವರ್ಷಗಳ ಹಿಂದೆ ಮಮತಾರನ್ನು ಪ್ರೀತಿಸಿ ವಿವಾಹವಾಗಿದ್ದ. ಮಮತಾ ಮೊದಲ ಪತ್ನಿಗೆ ವಿಚ್ಛೇದನ ನೀಡುವಂತೆ ಉದಯ್ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಜಮೀನು ವಿವಾದದ ಕಿತ್ತಾಟದಲ್ಲಿ 6 ಬಾರಿ ಟ್ರ್ಯಾಕ್ಟರ್ ಹತ್ತಿಸಿ ಯುವಕನ ಬರ್ಬರ ಹತ್ಯೆ!
ಎದೆಯಲ್ಲಿ ಗುಂಡು ಪತ್ತೆ: ಇದೇ ಕಾರಣಕ್ಕಾಗಿ ಉದಯ್ ಹಾಗೂ ಮಮತಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಮಂಗಳವಾರ ವಿದ್ಯುತ್ ಶಾಕ್‌ನಿಂದ ಪತ್ನಿ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಗ ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಈ ವಿಷಯ ತಿಳಿದ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ವೇಳೆ, ಮಮತಾ ಸಾವಿಗೆ ಬುಲೆಟ್ ಗಾಯಗಳು ಕಾರಣ ಎಂದು ಈ ವರದಿಯಲ್ಲಿ ಬಹಿರಂಗವಾಗಿದೆ.
ಈ ಕುರಿತು ತುಂಡ್ಲಾ ಪೊಲೀಸ್ ಠಾಣೆ ಪ್ರಭಾರಿ ಪ್ರದೀಪ್ ಕುಮಾರ್ ಪ್ರತಿಕ್ರಿಯಿಸಿ, ''ಆರೋಪಿ ಪತಿ ಉದಯ್ ಹೇಳಿಕೆಯ ಆಧಾರದ ಮೇಲೆ ಆರಂಭದಲ್ಲಿ ಮಮತಾ ವಿದ್ಯುತ್ ಶಾಕ್ನಿಂದಲೇ ಮೃತಪಟ್ಟಿದ್ದಾಳೆ ಎಂದು ಭಾವಿಸಲಾಗಿತ್ತು. ಆದರೆ, ಬುಧವಾರ ಬಂದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆ ಎದೆಯಲ್ಲಿ ಗುಂಡು ಪತ್ತೆಯಾಗಿದೆ. ಹೀಗಾಗಿ ಉದಯ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆಗ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ'' ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, ''ಪ್ರಕರಣದ ದಾರಿ ತಪ್ಪಿಸುವ ಉದ್ದೇಶದಿಂದ ಆರೋಪಿ ಸುಳ್ಳಿನ ಕಥೆ ಕಟ್ಟಿದ್ದಾನೆ. ಮೊದಲ ಪತ್ನಿಗೆ ವಿಚ್ಛೇದನ ನೀಡುವಂತೆ ಮಮತಾ ಒತ್ತಡ ಹೇರುತ್ತಿದ್ದರಿಂದ ಕೋಪಗೊಂಡು ಆಕೆಯನ್ನು ಕೊಂದಿದ್ದಾನೆ ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರೆದಿದೆ'' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಚ್ಚಿನಿಂದ ಪತ್ನಿಯ ಒಂದು ಕೈ, ಎರಡು ಕಾಲು ಕತ್ತರಿಸಿ ಪತಿಯ ಕ್ರೌರ್ಯ