ಲಖನೌ(ಉತ್ತರಪ್ರದೇಶ) : ಬುದ್ಧಿಮಾಂದ್ಯ ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಂಬಂಧ ವ್ಯಕ್ತಿಗೆ ಪೋಕ್ಸೋ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 30 ಸಾವಿರ ರೂ ದಂಡವನ್ನು ವಿಧಿಸಿ ಆದೇಶಿಸಿದ್ದು, ದಂಡ ಅರ್ಧ ಮೊತ್ತವನ್ನು (15 ಸಾವಿರ ) ಸಂತ್ರಸ್ತೆಗೆ ನೀಡುವಂತೆ ಹೇಳಿದೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಸುಖೇಂದ್ರ ಸಿಂಗ್ ಅವರು, ಆರೋಪಿ ವಿರುದ್ಧ 2017ರ ಜುಲೈ 17 ರಂದು ಕೃಷ್ಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ಆರೋಪಿ ಲಾಲತಾ ಪ್ರಸಾದ್ ಪತ್ನಿ ಮತ್ತು ಮಗನೊಂದಿಗೆ ಸಿಂಗಾರ್ ನಗರದಲ್ಲಿದ್ದ ಸಂಬಂಧಿಕರ ಮನೆಗೆ ಹೋಗಿದ್ದರು. ಇಲ್ಲಿನ ಸಂಬಂಧಿಕರ ಮನೆಯಲ್ಲಿ ಬುದ್ಧಿ ಮಾಂದ್ಯ ಬಾಲಕಿ ಇದ್ದಳು. ಈಕೆಗೆ ಏನು ತಿಳಿಯುವುದಿಲ್ಲ ಎಂದು ಆರೋಪಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಬಳಿಕ ಸಂತ್ರಸ್ತೆಯು ತನ್ನ ತಾಯಿಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಪ್ರಕರಣ ಸಂಬಂಧ ಗೊತ್ತಾಗುತ್ತಿದ್ದಂತೆ ಆರೋಪಿ ಪರಾರಿಯಾಗಲು ಯತ್ನಿಸಿದ್ದ ಎಂದು ತಿಳಿಸಿದ್ದಾರೆ. ಸದ್ಯ ವಿಶೇಷ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ : ಬಳ್ಳಾರಿ: ಕಾಲೇಜಿನಿಂದ ವಿದ್ಯಾರ್ಥಿನಿ ಅಪಹರಿಸಿ ಗ್ಯಾಂಗ್ ರೇಪ್
ಬಾಲಕಿ ಮೇಲೆ ಅತ್ಯಾಚಾರ.. 20 ವರ್ಷ ಕಠಿಣ ಜೈಲು ಶಿಕ್ಷೆ : ಕಳೆದ 2020ರ ಡಿಸೆಂಬರ್ನಲ್ಲಿ ನಡೆದಿದ್ದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರಿಗೆ ಶಿವಮೊಗ್ಗ ಜಿಲ್ಲಾ ಎರಡನೇ ಪೋಕ್ಸೊ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ ದಂಡ ವಿಧಿಸಿ ಆದೇಶಿಸಿತ್ತು. ಮನೋಜ್, ಪ್ರಜ್ವಲ್, ವಿನಯ್ ಹಾಗೂ ಪ್ರದೀಪ್ ಶಿಕ್ಷೆಗೊಳಗಾದ ಅಪರಾಧಿಗಳು.
ತಾಯಿಯ ಆರೈಕೆಗೆ ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ : ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದ ಬಾಲಕಿಯ ಮೇಲೆ ನಾಲ್ವರು ಯುವಕರು ಅತ್ಯಾಚಾರ ಎಸಗಿದ್ದರು. ಆಸ್ಪತ್ರೆಯಲ್ಲಿದ್ದ ತಾಯಿಯ ಆರೈಕೆಗೆ ಬಾಲಕಿ ಆಗಮಿಸಿದ್ದಳು. ಈ ವೇಳೆ, ಡಿಸೆಂಬರ್ 6 ರಂದು ತಾಯಿಗೆ ಊಟ ತರಲು ಆಸ್ಪತ್ರೆಯಿಂದ ಬಾಲಕಿ ಹೊರ ಬಂದಿದ್ದಳು. ಅಂದು ಶಿವಮೊಗ್ಗದಲ್ಲಿ ನಡೆದಿದ್ದ ಗಲಾಟೆಯಿಂದ ಸೆಕ್ಷನ್ 144 ಜಾರಿ ಮಾಡಲಾಗಿತ್ತು. ಇದರಿಂದ ಊಟಕ್ಕಾಗಿ ಹೊರ ಬಂದ ಬಾಲಕಿಯನ್ನು ನಾಲ್ವರು ಓಮ್ನಿ ಕಾರಿನಲ್ಲಿ ಬಂದು ನಗರದ ಹೊರ ವಲಯಕ್ಕೆ ಕರೆದುಕೊಂಡು ಹೋಗಿ, ಅತ್ಯಾಚಾರ ಕೃತ್ಯ ಎಸಗಿದ್ದರು. ಬಳಿಕ ವಾಪಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.