ಮೈನ್‌ಪುರಿ, ಉತ್ತರಪ್ರದೇಶ: ಹಳೇ ದ್ವೇಷ ಮತ್ತು ವಿವಾದದ ಭೂಮಿಯಲ್ಲಿ ಕಸ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ದುರಂತ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ಸೇರಿದಂತೆ ಇಬ್ಬರು ಪುರಷರು ಮೃತಪಟ್ಟಿರುವುದು ತಿಳಿದು ಬಂದಿದೆ. ಈ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯನ್ನು ರಾಹುಲ್ ಯಾದವ್ (28) ಎಂದು ಗುರುತಿಸಲಾಗಿದ್ದು, ನಾಡ ಬಂದೂಕನ್ನು ಬಳಸಿ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಲಾಗಿದೆ. ಮೂವರು ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಇಟಾವಾ ಜಿಲ್ಲೆಯ ಸೈಫೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿವಳಿ ಹತ್ಯೆಯ ಹಿಂದಿನ ಉದ್ದೇಶವು ಎರಡು ಸಂಬಂಧಿತ ಕುಟುಂಬಗಳ ನಡುವಿನ ತುಂಡು ಭೂಮಿ ಸ್ವಾಧೀನಪಡಿಸಿಕೊಳ್ಳುವ ವಿವಾದ ಮತ್ತು ವರ್ಷಗಳಿಂದ ಸಾಗುತ್ತಿರುವ ದ್ವೇಷವಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: ಈ ಗುಂಡಿನ ದಾಳಿ ಕರ್ಹಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಅತಿರಾಮ್ ಗ್ರಾಮಕ್ಕೆ ಸಂಬಂಧಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇಲ್ಲಿ ನೆಲೆಸಿರುವ ರಾಹುಲ್ ಯಾದವ್ ಕುಟುಂಬಗಳ ನಡುವಿನ ತುಂಡು ಭೂಮಿ ವಿವಾದ ಮೊದಲಿನಿಂದಲೂ ನಡೆಯುತ್ತಿತ್ತು. ಈ ವಿವಾದ ಭೂಮಿಯಲ್ಲಿ ಕಸ ಹಾಕುವ ವಿಚಾರವಾಗಿ ಚಿಕ್ಕಪ್ಪ ಕಯಂ ಸಿಂಗ್ ಜತೆ ರಾಹುಲ್ ಜಗಳವಾಡಿದ್ದರು.
ಈ ವಿವಾದ ವಿಕೋಪಕ್ಕೆ ತಿರುಗಿದ್ದು, ಸೋಮವಾರ ಗ್ರಾಮದ ಹೊರಗೆ ಕಯಾಮ್ ಸಿಂಗ್ ಮೇಲೆ ರಾಹುಲ್ ಗುಂಡು ಹಾರಿಸಿದ್ದರು. ಇದರ ನಂತರ ರಾಹುಲ್ ನೇರವಾಗಿ ತಮ್ಮ ಚಿಕ್ಕಪ್ಪನ ಮನೆಗೆ ನುಗ್ಗಿದ್ದಾನೆ. ಅಲ್ಲಿ ಆತ ರಾಮೇಶ್ವರ ದಯಾಳ್ ಮತ್ತು ಆತನ ತಾಯಿ ಮಮತಾ ದೇವಿಯವರ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಈ ಗುಂಡಿನ ದಾಳಿಯಲ್ಲಿ ಕುಟುಂಬದ ಮಹಿಳೆ ಸರೋಜಾದೇವಿಗೆ ಬುಲೆಟ್ ತಗುಲಿದ್ದು, ಆಕೆ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಸೈಫಾಯಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಅವರ ಮಧ್ಯ ಇರುವ ವಿವಾದ ಭೂಮಿಯಲ್ಲಿ ಕಸ ಸುರಿಯುವ ವಿಚಾರವಾಗಿ ರಾಹುಲ್ ಯಾದವ್ ಇತರರೊಂದಿಗೆ ಸೇರಿ ತನ್ನ ಚಿಕ್ಕಪ್ಪ ಕಯಾಮ್ ಸಿಂಗ್ ಜೊತೆ ಜಗಳವಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು, ಮೂವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಸೆರೆ ಹಿಡಿಯಲಾಗುವುದು ಮತ್ತು ಆರೋಪಿ ಸೆರೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಹಿಂದೆಯೂ ಕುಟುಂಬದಲ್ಲಿ ಕಲಹವಿದ್ದು, ಪೊಲೀಸರಿಗೆ ಮಾಹಿತಿ ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಜನರು ಆರೋಪಿಸಿದ್ದಾರೆ. ಪೊಲೀಸರು ಕಯಂ ಸಿಂಗ್, ರಾಮೇಶ್ವರ್ ದಯಾಳ್ ಮತ್ತು ಮಮತಾ ದೇವಿ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ತ್ರಿವಳಿ ಹತ್ಯೆಯ ನಂತರ ಮುಂಜಾಗ್ರತಾ ಕ್ರಮವಾಗಿ ಹಲವು ಪೊಲೀಸ್ ಠಾಣೆಗಳ ಪೊಲೀಸ್ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಓದಿ: Honour killing: ಮರ್ಯಾದೆಗಾಗಿ ಪ್ರೇಮಿಗಳ ಕೊಂದು ಮೊಸಳೆಗಳಿದ್ದ ನದಿಗೆ ಶವ ಬಿಸಾಡಿದ ಕುಟುಂಬಸ್ಥರು!