ಲಖನೌ(ಉತ್ತರ ಪ್ರದೇಶ) : ಆಜಂಗಢ ಜಿಲ್ಲೆಯ ವಿದ್ಯಾರ್ಥಿನಿ ಸಾವಿನ ಪ್ರಕರಣ ಮಾಸುವ ಮುನ್ನವೇ ಮಿರ್ಜಾಪುರ ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಐದನೇ ತರಗತಿಯ ವಿದ್ಯಾರ್ಥಿನಿಯೊಬ್ಬರಿಗೆ ಗಣಿತ ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕಾಗಿ ಶಾಲೆಯ ಪ್ರಾಂಶುಪಾಲರು ಎರಡೂ ಕೈಗಳಿಗೆ 50 ಸಲ ಕೋಲಿನಿಂದ ಹೊಡೆದಿದ್ದಾರೆ ಮತ್ತು ಕಿವಿ ಹಿಡಿದುಕೊಂಡು 200 ಬಾರಿ ಬಸ್ಕಿ ಹೊಡೆಸಿದ್ದಾರೆ. ಶಿಕ್ಷಕರು ನೀಡಿದ ಈ ಶಿಕ್ಷೆಯಿಂದ ಬಾಲಕಿಗೆ ಜ್ವರ ಕಾಣಿಸಿಕೊಂಡಿದ್ದು, ಭಯದಿಂದ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಹೌದು, ಮಿರ್ಜಾಪುರ ಜಿಲ್ಲೆಯ ಶಬರಿ ಚುಂಗಿ ಭೈಂಶಿಯಾ ತೋಲಾ ಎಂಬಲ್ಲಿನ ಶಾಲೆಯೊಂದರಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಪ್ರಾಂಶುಪಾಲರ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕಾಗಿ ಪ್ರಾಂಶುಪಾಲರು ನನಗೆ ದೊಣ್ಣೆಯಿಂದ 50 ಬಾರಿ ಮನಬಂದಂತೆ ಥಳಿಸುವ ಮೂಲಕ 200 ಬಾರಿ ಬಸ್ಕಿ ಹೊಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಇದನ್ನೂ ಓದಿ : Viral Video : ‘ ಚಿಕ್ಕಮಕ್ಕಳಿಗೆ ಯಾಕಿಷ್ಟು ಹೋಂ ವರ್ಕ್ ಮೋದಿ ಸಾಬ್ ? ’
ಈ ಕುರಿತು ಸಿಟ್ಟಿಗೆದ್ದ ವಿದ್ಯಾರ್ಥಿನಿಯ ತಂದೆ ಗುರುವಾರ ಜಿಲ್ಲಾಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಕೊಡಿಸುವ ಜೊತೆಗೆ ಪ್ರಾಂಶುಪಾಲರ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಬಿಎಸ್‌ಎ ಸಹ ಈ ಬಗ್ಗೆ ತನಿಖೆ ನಡೆಸುವಂತೆ ಬ್ಲಾಕ್ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದೆ.
ಇದನ್ನೂ ಓದಿ : ಚಿಣ್ಣರಿಗೆ ಇನ್ಮುಂದೆ 'ನೋ' ಹೋಮ್ ವರ್ಕ್.. ಇದೇ ಶೈಕ್ಷಣಿಕ ವರ್ಷದಿಂದಲೇ ಹೊಸ ರೂಲ್ಸ್ ಜಾರಿ ?
ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದ್ಯಾರ್ಥಿನಿಯ ತಂದೆ ವಿಕೇಶ್ ಕುಮಾರ್, ’’ನನ್ನ ಮಗಳು ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಗಸ್ಟ್ 5 ರಂದು ಶಾಲೆಗೆ ಹೋಗಿದ್ದಳು. ಅಂದು ಹೋಂ ವರ್ಕ್ ಮುಗಿಸಿರಲಿಲ್ಲ. ಇದರಿಂದ ಕೋಪಗೊಂಡ ಪ್ರಾಂಶುಪಾಲರು ಕೋಲಿನಿಂದ ಮನಬಂದಂತೆ ಥಳಿಸಿದ್ದಾರೆ. ಬಳಿಕ, 200 ಬಾರಿ ಸಿಟ್ ಅಪ್ ಮಾಡುವಂತೆ ಶಿಕ್ಷೆ ವಿಧಿಸಿದ್ದಾರೆ. ಹೊಡೆತ ತಿಂದ ಬಳಿಕ ಆಕೆಗೆ ಜ್ವರ ಬಂದಿದ್ದು, ಈಗ ಭಯದಿಂದ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾಳೆ " ಎಂದು ದೂರಿದ್ದಾರೆ.
ಇದನ್ನೂ ಓದಿ : ಉಚಿತವಾಗಿ ಮಕ್ಕಳಿಗೆ ಮನೆ ಪಾಠ ಮಾಡುತ್ತಿರುವ ಯುವಕ : ಗ್ರಾಮಸ್ಥರಿಂದ ಮೆಚ್ಚುಗೆ
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಮೂಲ ಶಿಕ್ಷಣಾಧಿಕಾರಿ ಅನಿಲ್ ಕುಮಾರ್ ವರ್ಮಾ, " ವಿಷಯ ನಮ್ಮ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ತನಿಖೆ ನಡೆಸಿ, ವರದಿ ನೀಡುವಂತೆ ಬ್ಲಾಕ್ ಶಿಕ್ಷಣಾಧಿಕಾರಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು " ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಮನೆಪಾಠ ಮಾಡದ್ದಕ್ಕೆ ಬಾಲಕಿಯನ್ನು ಕೈ- ಕಾಲು ಕಟ್ಟಿ ಛಾವಣಿ ಮೇಲೆ ಬಿಸಾಡಿದ ಪೋಷಕರು !