ಮಹೋಬ (ಉತ್ತರಪ್ರದೇಶ) : ಈ ಆಧುನಿಕ ಕಾಲದಲ್ಲೂ ಜನರು ತಂತ್ರ- ಮಂತ್ರಗಳ ಮೂಢನಂಬಿಕೆಗೆ ಸಿಲುಕಿ ಜೀವವನ್ನೇ ಅಪಾಯಕ್ಕೆ ತಳ್ಳುವ ಪರಿಪಾಠ ಮಾತ್ರ ನಿಂತಿಲ್ಲ. ಇಂಥದ್ದೇ ಒಂದು ಘಟನೆಯಲ್ಲಿ ಗರ್ಭಿಣಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆಯ ವಿವರ: ಉತ್ತರಪ್ರದೇಶದ ಮಹೋಬಾ ನಗರದ ನಿವಾಸಿಯಾದ ಗರ್ಭಿಣಿ ಪೂಜಾ(20) ಅವರು ಮಾಂತ್ರಿಕ ವಿದ್ಯೆಗೆ ಬಲಿಯಾದವರು. ಪತಿಯ ಜೊತೆಗೆ ಮುಂಬೈನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಗರ್ಭಿಣಿಯಾದ ನಂತರ ಪೂಜಾಳ ಆರೋಗ್ಯವು ಹದಗೆಡಲು ಆರಂಭಿಸಿತ್ತು. ಇದರಿಂದ ಆಕೆಯನ್ನು ಮಹೋಬಾಕ್ಕೆ ಕರೆದುಕೊಂಡು ಬಂದಿದ್ದಾರೆ. ದಿನವೂ ಆರೋಗ್ಯದಲ್ಲಿ ವ್ಯತ್ಯಯವಾಗುತ್ತಿದ್ದ ಕಾರಣ ಮಹಿಳೆಗೆ ದೆವ್ವ ಹಿಡಿದಿದೆ ಎಂದು ಭಾವಿಸಿ ಪತಿಯ ಕುಟುಂಬಸ್ಥರು ಗ್ರಾಮದ ತಂತ್ರಿಯೊಬ್ಬರ ಬಳಿ ಕರೆದುಕೊಂಡು ಹೋಗಿದ್ದಾರೆ.
ಆ ಮಾಂತ್ರಿಕ ಮಹಿಳೆಗೆ ಅದೇನು ಚಿಕಿತ್ಸೆ ನೀಡಿದನೋ ಏನೋ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಇದರಿಂದ ಭಯಗೊಂಡ ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಗರ್ಭಿಣಿ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ.
ಸೊಸೆಯ ಬಗ್ಗೆ ಅತ್ತೆ ಹೇಳಿಕೆ: ಸೊಸೆ ಪೂಜಾ ಗರ್ಭಿಣಿಯಾಗಿದ್ದಳು. ದಿನದಿಂದ ದಿನಕ್ಕೆ ಆಕೆಯ ಆರೋಗ್ಯ ಹದಗೆಡುತ್ತಿತ್ತು. ದಿನವೂ ಕಿರುಚುತ್ತಾ ಕೂಗಾಡುತ್ತಿದ್ದಳು. ಜೊತೆಗೆ ಬೇರೆ ಬೇರೆ ಶಬ್ದಗಳನ್ನೂ ಮಾಡುತ್ತಿದ್ದಳು. ಇದ್ಯಾವುದೋ ಗಾಳಿಯ ಪ್ರಭಾವ ಇರಬೇಕು ಎಂದು ನಗರದ ತಾಂತ್ರಿಕನ ಬಳಿಕ ಕರೆದುಕೊಂಡು ಹೋಗಿದ್ದೆವು. ಭೂತೋಚ್ಚಾಟನೆಯ ವೇಳೆ ಸೊಸೆಯ ಸ್ಥಿತಿ ಹದಗೆಟ್ಟಿತು. ತಂತ್ರಿಯು ಹೊಟ್ಟೆಯನ್ನು ಒತ್ತಿದಾಗ ಹೊಟ್ಟೆ ನೋವು ಹೆಚ್ಚಾಗಿ ಕಿರುಚಾಡುತ್ತಾ ಆಕೆ ಮೂರ್ಛೆ ಹೋದಳು. ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಸಾವನ್ನಪ್ಪಿದ್ದಾಗಿ ತಿಳಿಸಿದರು ಎಂದು ಘಟನೆಯ ಬಗ್ಗೆ ವಿವರಿಸಿದರು.
ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯ ಪಂಕಜ್ ಅವರು ಗರ್ಭಿಣಿ ಆಸ್ಪತ್ರೆಗೆ ಬರುವ ಮುಂಚೆಯೇ ಮೃತಪಟ್ಟಿದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ಹೇಳಿದ್ದಾರೆ.
ಚಿಕಿತ್ಸೆ ಸಿಗದೇ ಗರ್ಭಿಣಿ ಸಾವು: ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಸೂಕ್ತ ಚಿಕಿತ್ಸೆ ನೀಡದ ಕಾರಣ ಗರ್ಭಿಣಿಯೊಬ್ಬರು ಬಿಹಾರದ ವೈಶಾಲಿಯಲ್ಲಿ ಸಾವನ್ನಪ್ಪಿದ ಘಟನೆ ಈಚೆಗೆ ನಡೆದಿತ್ತು. ಆಸ್ಪತ್ರೆಯ ಹಣದ ಲಾಲಸೆಗೆ ಪ್ರಪಂಚಕ್ಕೆ ಕಾಲಿಡಬೇಕಿದ್ದ ಪುಟ್ಟ ಕಂದಮ್ಮ ಮತ್ತು ತಾಯಿ ಇಬ್ಬರೂ ಕಣ್ಣುಮುಚ್ಚಿದ್ದರು.
ಇದನ್ನೂ ಓದಿ: ಲಿವ್ ಇನ್ ರಿಲೇಶನ್ ಶಿಪ್: ಇಸ್ಲಾಂಗೆ ಮತಾಂತರ ಒತ್ತಡ, ಗರ್ಭಿಣಿ ಸಾವು; ಇಬ್ಬರ ಬಂಧನ