ಮೀರತ್ (ಉತ್ತರ ಪ್ರದೇಶ): ಕುಟುಂಬಸ್ಥರು ಕೊಲೆಯಾಗಿದ್ದಾನೆ ಎಂದು ಭಾವಿಸಿದ್ದ ಯುವಕನೊಬ್ಬ ತನ್ನ ಗೆಳೆತಿಯೊಂದಿಗೆ ಸುತ್ತಾಡುತ್ತಿರುವ ವಿಚಿತ್ರ ಪ್ರಕರಣ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ, ನಿಜವಾಗಿಯೂ ಮೃತ ಯುವಕ ಯಾರು ಎಂದು ಪೊಲೀಸರು ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಐದು ದಿನಗಳ ಹಿಂದೆ ಜಿಲ್ಲೆಯ ದೌರಾಲಾ ಪ್ರದೇಶದ ಚರಂಡಿಯಲ್ಲಿ ಯುವಕನೊಬ್ಬನ ಶಿರಚ್ಛೇದಿತ ಶವ ಪತ್ತೆಯಾಗಿತ್ತು. ಆತನ ಕೈಗಳನ್ನು ಕತ್ತರಿಸಲಾಗಿತ್ತು. ಈ ಮೃತದೇಹದ ಗುರುತು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಇದೇ ವೇಳೆ, ಬುಧವಾರ ಮುಜಾಫರ್‌ನಗರ ಜಿಲ್ಲೆಯ ಕೆಲವರು ಆಗಮಿಸಿ ಶವವು ತಮ್ಮ ಮಗ ಮಾಂಟಿಯದ್ದಾಗಿದೆ ಎಂದು ಹೇಳಿಕೊಂಡಿದ್ದರು. ಅಲ್ಲದೇ, ಮೃತದೇಹವನ್ನು ತೆಗೆದುಕೊಂಡು ಹೋಗಿ, ತಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ಭಾವಿಸಿ ಕುಟುಂಬಸ್ಥರು ಇಡೀ ರಾತ್ರಿ ಕಣ್ಣೀರು ಹಾಕುತ್ತಿದ್ದರು.
ಇದನ್ನೂ ಓದಿ: ಮಂಡ್ಯ: ಅಟ್ಟಾಡಿಸಿಕೊಂಡು ಬಂದು ಯುವಕನ ಕೊಲೆಗೈದ ದುಷ್ಕರ್ಮಿಗಳು
ಅಷ್ಟೇ ಅಲ್ಲ, ಅಂತಿಮ ಸಂಸ್ಕಾರಕ್ಕೂ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಆದರೆ, ಅಷ್ಟರಲ್ಲಿ ಮಾಂಟಿ ಜೀವಂತವಾಗಿರುವುದು ಗೊತ್ತಾಗಿದೆ. ಚಂಡೀಗಢದಲ್ಲಿ ತನ್ನ ಗೆಳತಿಯೊಂದಿಗೆ ತಿರುಗಾಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅಂತೆಯೇ, ಅಪರಿಚಿತ ಯುವಕನ ಮೃತದೇಹದೊಂದಿಗೆ ಕುಟುಂಬಸ್ಥರು ಮತ್ತೆ ಮೀರತ್‌ಗೆ ತೆರಳಿದ್ದ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಈ ಘಟನೆ ಸ್ಥಳೀಯ ಜನತೆಯನ್ನು ಬೆಚ್ಚಿ ಬೀಳಿಸಿದೆ. ಜೊತೆಗೆ ಪೊಲೀಸರ ತನಿಖೆಯ ದಿಕ್ಕನ್ನೂ ಬದಲಿಸಿದೆ.
ಮಾಂಟಿ ರಹಸ್ಯ ಬಯಲಾಗಿದ್ದು ಹೀಗೆ?: ಮಾಂಟಿ ತನ್ನ ಗೆಳತಿಯೊಂದಿಗೆ ಆಗಸ್ಟ್ 28ರಿಂದ ನಾಪತ್ತೆಯಾಗಿದ್ದ. ಆಗಸ್ಟ್ 29ರಂದು ಯುವತಿ ಪೋಷಕರು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ಮಾಂಟಿ ವಿರುದ್ಧ ಮುಜಾಫರ್‌ನಗರದ ಮನ್ಸೂರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮತ್ತೊಂದೆಡೆ, ಮಾಂಟಿ ಕುಟುಂಬಸ್ಥರು ಕೂಡ ಆತನ ಬಗ್ಗೆ ನಾಪತ್ತೆ ದೂರು ದಾಖಲಿಸಿದ್ದರು.
ಇದಲ್ಲದೇ, ಯುವತಿಯ ಕುಟುಂಬಸ್ಥರೇ ಇಬ್ಬರನ್ನೂ ಕೊಲೆ ಮಾಡಿದ್ದಾರೆ. ಇಬ್ಬರ ಶವಗಳನ್ನು ಪ್ರತ್ಯೇಕವಾಗಿ ಎಲ್ಲೋ ಬಚ್ಚಿಡಲಾಗಿದೆ ಎಂದು ಮಾಂಟಿ ಕುಟುಂಬದವರು ಆರೋಪಿಸಿದ್ದರು. ಇದಾದ ಬಳಿಕ ಮುಜಾಫರ್‌ನಗರ ಪೊಲೀಸರು ಇಬ್ಬರ ಕುರಿತು ಸುಳಿವು ಪತ್ತೆಯಾಗಿ ಹುಡುಕಾಟ ಆರಂಭಿಸಿದ್ದರು. ಇದರ ಭಾಗವಾಗಿ ಪೊಲೀಸರು ಚಂಡೀಗಢದಲ್ಲಿ ಮಾಂಟಿ ಯುವತಿಯೊಂದಿಗೆ ಸುತ್ತುತ್ತಿರುವುದನ್ನು ಪತ್ತೆ ಹಚ್ಚಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಇದನ್ನು ಖಚಿತ ಪಡಿಸಿಕೊಂಡಿದ್ದರು. ಇದಾದ ನಂತರ ಮಾಂಟಿ ಹಾಗೂ ಆತನ ಗೆಳತಿಯನ್ನು ಚಂಡೀಗಢದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಮೀರತ್ ಎಸ್‌ಎಸ್‌ಪಿ ರೋಹಿತ್ ಸಿಂಗ್ ಸಜ್ವಾನ್ ತಿಳಿಸಿದ್ದಾರೆ.
ಮತ್ತೊಂದೆಡೆ, ಚರಂಡಿಯಲ್ಲಿ ಪತ್ತೆಯಾದ ಯುವಕನ ಮೃತದೇಹದ ಗುರುತು ಪತ್ತೆ ಹಚ್ಚಲು ಪೊಲೀಸರು ತಮ್ಮ ತನಿಖೆ ಮುಂದೂವರೆಸಿದ್ದಾರೆ. ಅಲ್ಲದೇ, ದೆಹಲಿ, ಹರಿಯಾಣ, ಪಂಜಾಬ್, ಉತ್ತರಾಖಂಡ ಸೇರಿದಂತೆ ಗಡಿಭಾಗದ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೂ ಮೃತದೇಹದ ಛಾಯಾಚಿತ್ರಗಳನ್ನು ಪೊಲೀಸರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ