ಅಲಿಗಢ (ಉತ್ತರ ಪ್ರದೇಶ): ಹಸೆಮಣೆ ಏರಲು ಸಜ್ಜಾಗಿದ್ದ ವರನೊಬ್ಬ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದು, ಇದರಿಂದ ಆತನ ಅಣ್ಣನೊಂದಿಗೆ ಯುವತಿಗೆ ವಿವಾಹ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ. ಹತ್ರಾಸ್ ಜಿಲ್ಲೆಯ ಸಿಕಂದರರಾವ್ ನಿವಾಸಿ ಫೈಸಲ್ ಎಂಬಾತನೇ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಬಂಧಿತ ಫೈಸಲ್ನ ಮದುವೆ ಸೆಪ್ಟೆಂಬರ್ 11ರಂದು ಅಲಿಘರ್ ನಗರದ ರೋರಾವರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯೊಂದಿಗೆ ನಿಗದಿಯಾಗಿತ್ತು. ಸೋಮವಾರ ಬಹುತೇಕ ಎಲ್ಲ ವಿವಾಹ ವಿಧಿವಿಧಾನಗಳು ಪೂರ್ಣಗೊಂಡಿದ್ದವು. ಇಲ್ಲಿಗೆ ಸಂಜೆ ಹತ್ರಾಸ್ ಜಿಲ್ಲೆಯ ಸಿಕಂದರರಾವ್‌ನಿಂದ ವರ ಫೈಸಲ್ ಸಮೇತವಾಗಿ ಮದುವೆ ದಿಬ್ಬಣ ಅಲಿಗಢಕ್ಕೆ ಹೊರಟಿತ್ತು. ಹತ್ರಾಸ್ ಗಡಿ ದಾಟಿ ಅಲಿಗಢ್ ಜಿಲ್ಲೆಯ ಇಟಾಹ್ ರಸ್ತೆಯ ಟೋಲ್ ಪ್ಲಾಜಾ ತಲುಪುತ್ತಿದ್ದಂತೆ ಪೊಲೀಸರು ವರನ ಕಾರನ್ನು ತಡೆದಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಹೆಸರು ಹೇಳದ ಯುವಕನ ಬಿಟ್ಟು ಕಿರಿ ಸಹೋದರನ ಜೊತೆ ಮದುವೆಯಾದ ಯುವತಿ!
ಇದಾದ ಬಳಿಕ ಪೊಲೀಸರು ವರ ಫೈಸಲ್ನನ್ನು ವಶಕ್ಕೆ ಪಡೆದುಕೊಂಡು ಅಕಾರಾಬಾದ್ ಠಾಣೆಗೆ ಕರೆದೊಯ್ದಿದ್ದಾರೆ. ವರನ ಬಂಧನದ ನಂತರ ಮದುವೆಗೆ ಹೊರಟಿದ್ದ ಬಂಧು ಬಳಗ ಕೂಡ ಪೊಲೀಸ್ ಠಾಣೆ ಮುಂದೆ ಸೇರಿದ್ದರು. ಮದುವೆ ನಿಶ್ಚಯವಾಗಿದ್ದರಿಂದ ಆತನನ್ನು ಬಿಡುವಂತೆ ಕುಟುಂಬಸ್ಥರು ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ, ಆರೋಪಿ ಫೈಸಲ್ನನ್ನು ಬಿಡಲೊಪ್ಪದ ಪೊಲೀಸರು ತಮ್ಮ ಮುಂದಿನ ಕಾರ್ಯದಲ್ಲಿ ನಿರತರಾಗಿದ್ದರು.
ವರನ ಅಣ್ಣನೊಂದಿಗೆ ಮದುವೆ: ಮದುವೆ ಆಗಬೇಕಿದ್ದ ವರ ಫೈಸಲ್ ಪೊಲೀಸರ ಅತಿಥಿಯಾಗಿದ್ದರಿಂದ ಕುಟುಂಬಸ್ಥರು ಮಾತುಕತೆ ನಡೆಸಿದ ಯುವತಿಯ ಮದುವೆ ನಿಲ್ಲದಂತೆ ನೋಡಿಕೊಂಡಿದ್ದಾರೆ. ಫೈಸಲ್ನ ಹಿರಿಯ ಸಹೋದರ ಚಾಂದ್ ಮಿನ್ಯಾ ಜೊತೆ ಯುವತಿಗೆ ಮದುವೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಫೈಸಲ್ ಬಂಧನಕ್ಕೆ ಕಾರಣ: ಕೆಲ ದಿನಗಳ ಹಿಂದೆ ಅಕಾರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಸಿಂಪುರದ ಮದ್ಯದಂಗಡಿಯಲ್ಲಿ ಕಳ್ಳತನ ನಡೆದಿತ್ತು. ಈ ಅಂಗಡಿಯ ಬೀಗ ಮುರಿದು 35 ಮದ್ಯದ ಬಾಕ್ಸ್‌ಗಳು ಹಾಗೂ ಇತರೆ ವಸ್ತುಗಳನ್ನು ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸ್ಥಳದಲ್ಲಿ ಬೈಕ್ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದರು.
ಕಳ್ಳತನವಾದ ದಿನವೇ ಆರೋಪಿಗಳು ಬೈಕ್ ಹಾಗೂ ಫೋನ್ ಬಿಟ್ಟು ಪರಾರಿಯಾಗಿದ್ದರು. ಇದಾದ ಆಧಾರದ ಮೇಲೆ ತನಿಖೆ ಕೈಗೊಂಡಾಗ ಫೈಸಲ್ ಕೂಡ ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಬಯಲಿಗೆ ಬಂದಿತ್ತು. ಸೋಮವಾರ ಫೈಸಲ್ ಮದುವೆಯಾಗಲು ಅಲಿಗಢ ನಗರಕ್ಕೆ ಬರುತ್ತಿರುವ ಮಾಹಿತಿ ಲಭ್ಯವಾಗಿತ್ತು ಅಂತೆಯೇ, ಅಲಿಗಢ-ಇಟಾಹ್ ರಸ್ತೆಯ ಟೋಲ್ ಪ್ಲಾಜಾ ಬಳಿ ಕಾರಿನಲ್ಲಿ ಕುಳಿತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸರ್ಜನಾ ಸಿಂಗ್ ತಿಳಿಸಿದ್ದಾರೆ.
ಅಲ್ಲದೇ, ಬಂಧಿತ ಆರೋಪಿಗಳ ಮಾಹಿತಿ ಮೇರೆಗೆ ಕದ್ದ ಮದ್ಯದ ಕೆಲವು ಬಾಕ್ಸ್‌ಗಳು ಮತ್ತು ಒಂದು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಇತರ ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ತುಮಕೂರು: ತಾಳಿ ಕಟ್ಟಿಸಿಕೊಳ್ಳುವ ಶುಭ ವೇಳೆ ಉಲ್ಟಾ ಹೊಡೆದ ವಧು.. ಮುರಿದು ಬಿದ್ದ ಮದುವೆ