ಚಾಯಿಬಾಸಾ (ಜಾರ್ಖಂಡ್) : ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇಂತಹುದೇ ಪ್ರಕರಣವೊಂದು ಪಶ್ಚಿಮ ಸಿಂಗ್ ಭೂಮ್ ಜಿಲ್ಲೆಯ ಚಾಯಿಬಾಸಾದಲ್ಲಿ ವರದಿಯಾಗಿದೆ. ಅನ್ಯ ಧರ್ಮದ ಯುವಕನೋರ್ವ ತನ್ನ ಹೆಸರನ್ನು ಮರೆಮಾಚಿ ಬಾಲಕಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಮೋಸ ಮಾಡಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಯುವಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಗರ್ಭಪಾತ ಮಾಡಿಸಿದ್ದು, ಈ ಬಗ್ಗೆ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಚಕ್ರಧರಪುರದ ಅದ್ನಾನ್ ಖಾನ್ ಎಂದು ಗುರುತಿಸಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಆರೋಪಿ ಅದ್ನಾನ್ ಖಾನ್ ಸಂತ್ರಸ್ತ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ. ಈ ವೇಳೆ ಆರೋಪಿಯು ತನ್ನ ಹೆಸರನ್ನು ಮರೆಮಾಚಿ ಅಮಿತ್ ಕುಮಾರ್ ಎಂದು ಹೇಳಿಕೊಂಡಿದ್ದ. ಬಳಿಕ ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿದೆ. ಈ ನಡುವೆ ಬಾಲಕಿ ಅದ್ನಾನ್ ಬಳಿ ಆತನ ಧರ್ಮದ ಬಗ್ಗೆ ಕೇಳಿದ್ದರೂ, ಆರೋಪಿ ತನ್ನನ್ನು ತಾನು ಬಿಹಾರಿ ಎಂದು ಹೇಳಿಕೊಂಡಿದ್ದ. ಈತನನ್ನು ನಂಬಿದ ಬಾಲಕಿ ಅದ್ನಾನ್ನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಳು. ಬಳಿಕ ಇಬ್ಬರೂ ದೇವಗಾಂವ್ನಲ್ಲಿರುವ ಶಿವ ದೇವಾಲಯದಲ್ಲಿ ಮದುವೆಯಾಗಿದ್ದಾರೆ.
ಮದುವೆಯ ಬಳಿಕ ಅದ್ನಾನ್ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಅದ್ನಾನ್ ಮನೆಯವರು ಬಾಲಕಿಯು ಅಪ್ರಾಪ್ತೆಯಾಗಿದ್ದರಿಂದ ಮನೆಯಲ್ಲಿ ಇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಬಳಿಕ ಆರೋಪಿ ಅದ್ನಾನ್ ಖಾನ್ ಬಾಲಕಿಯನ್ನು ಒಂದು ದಿನದ ಮಟ್ಟಿಗೆ ತನ್ನ ಮನೆಯಲ್ಲಿರಿಸಿ ಬಳಿಕ ಮರುದಿನ ಬಾಲಕಿಯನ್ನು ಆಕೆಯ ಮನೆಗೆ ಬಿಟ್ಟು ಬಂದಿದ್ದಾನೆ. ಬಳಿಕವೂ ಇಬ್ಬರೂ ಪರಸ್ಪರ ಭೇಟಿಯನ್ನು ಮುಂದುವರೆಸಿದ್ದಾರೆ. ಈ ನಡುವೆ ಬಾಲಕಿ ಗರ್ಭಿಣಿಯಾಗಿದ್ದು, ಅದ್ನಾನ್ ಬಾಲಕಿಗೆ ಔಷಧಿಯನ್ನು ನೀಡಿ ಗರ್ಭಪಾತ ಮಾಡಿಸಿದ್ದಾನೆ. ಬಳಿಕ ಮತ್ತೆ ಇಬ್ಬರೂ ಪರಸ್ಪರ ಭೇಟಿ ಮುಂದುವರೆಸಿದ್ದು, ಮತ್ತೊಮ್ಮೆ ಬಾಲಕಿ ಗರ್ಭಿಣಿಯಾಗಿದ್ದಾಳೆ.
ಈ ಬಗ್ಗೆ ಬಾಲಕಿಯು ಅದ್ನಾನ್ ಬಳಿ ಹೇಳಿದ್ದು, ಅದ್ನಾನ್ ಮತ್ತೆ ಬಾಲಕಿಯಲ್ಲಿ ಗರ್ಭಪಾತ ಮಾಡುವಂತೆ ಒತ್ತಡ ಹೇರಿದ್ದಾನೆ. ಆದರೆ ಇದಕ್ಕೆ ಒಪ್ಪದ ಯುವತಿಯು ಗರ್ಭಪಾತದ ಮಾತ್ರೆಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ. ಬಳಿಕ ಬಾಲಕಿಯು ನಡೆದ ಘಟನೆಗಳ ಬಗ್ಗೆ ತನ್ನ ತಾಯಿಯಲ್ಲಿ ವಿವರಿಸಿದ್ದಾಳೆ. ಬಳಿಕ ತಾಯಿಯು ಬಾಲಕಿಯೊಂದಿಗೆ ಇಲ್ಲಿನ ಚಕ್ರಧರಪುರ್ ಪೊಲೀಸ್ ಠಾಣೆಗೆ ತೆರಳಿ ಆರೋಪಿ ವಿರುದ್ಧ ದೂರು ದಾಖಲಿಸಿ ನ್ಯಾಯಕೊಡಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ಅದ್ನಾನ್ ಖಾನ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಮಾಡೆಲ್ನಿಂದ ಲವ್ ಜಿಹಾದ್ ಆರೋಪ : ಇತ್ತೀಚಿಗೆ ರಾಂಚಿಯಲ್ಲಿ ಮಾಡೆಲ್ವೊಬ್ಬರು ತನ್ನ ಮೇಲೆ ಲವ್ ಜಿಹಾದ್ ನಡೆದಿರುವುದಾಗಿ ಆರೋಪಿಸಿದ್ದರು. ಮಾಡೆಲ್ ತಾನು ಕೆಲಸ ಮಾಡುವ ಸಂಸ್ಥೆಯ ಮಾಲೀಕನ ಮೇಲೆ ಲವ್ ಜಿಹಾದ್ ಆರೋಪ ಹೊರಿಸಿದ್ದು, ಈ ಆರೋಪಿಯು ತನ್ನ ನಿಜ ಹೆಸರನ್ನು ಮರೆಮಾಚಿ ಲವ್ ಜಿಹಾದ್‌ನಲ್ಲಿ ಸಿಲುಕಿಸಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ತನ್ನನ್ನು ರಕ್ಷಿಸುವಂತೆ ಮಾಡೆಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ಈ ಸಂಬಂಧ ಆರೋಪಿ ವಿರುದ್ಧ ಪರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ : ಯುಪಿಯಲ್ಲಿ ಲವ್ ಜಿಹಾದ್ ಆರೋಪ.. ನ್ಯಾಯಾಲಯದ ಮೆಟ್ಟಿಲೇರಿದ ಸಂತ್ರಸ್ತೆ