ಹೈದರಾಬಾದ್ (ತೆಲಂಗಾಣ): ಅರ್ಚಕನೊಬ್ಬ ತನ್ನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಯುವತಿಯನ್ನು ಭೀಕರವಾಗಿ ಕೊಲೆಗೈದ ಘಟನೆ ಹೈದರಾಬಾದ್‌ನ ರಂಗಾರೆಡ್ಡಿ ಜಿಲ್ಲೆಯ ಶಂಶಾಬಾದ್‌ನಲ್ಲಿ ನಡೆದಿದೆ. ವೆಂಕಟ ಸಾಯಿಕೃಷ್ಣ ಹಂತಕ ಅರ್ಚಕ. ಅಪ್ಸರಾ ಕೊಲೆಗೀಡಾದ ಯುವತಿ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಪ್ಸರಾಳನ್ನು ಕೊಲೆಗೈದ ವೆಂಕಟ ಸಾಯಿಕೃಷ್ಣ ಮೃತದೇಹವನ್ನು ಮ್ಯಾನ್ ಹೋಲ್ಗೆ ಎಸೆದು ತಲೆಮರೆಸಿಕೊಂಡಿದ್ದ. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಸಾಯಿಕೃಷ್ಣ ಪೊಲೀಸರ ಮುಂದೆ ಅಸಲಿ ವಿಷಯ ಬಾಯ್ಬಿಟ್ಟಿದ್ದಾನೆ.
ಮೂಲತಃ ಹೈದರಾಬಾದ್‌ನ ಸರೂರ್‌ನಗರದ ನಿವಾಸಿಯಾಗಿರುವ ಆರೋಪಿ ವೆಂಕಟ ಸಾಯಿಕೃಷ್ಣ, ಸಮೀಪದ ದೇವಸ್ಥಾನಗಳಲ್ಲಿ ಅರ್ಚಕನಾಗಿ ಕೆಲಸಕೊಂಡಿದ್ದ. ವಿವಾಹಿತನಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಹಲವು ದಿನಗಳ ಹಿಂದೆ ತನ್ನ ಸಂಬಂಧಿಯಾಗಿದ್ದ ಅಪ್ಸರಾಳೊಂದಿಗೆ ಸಾಯಿಕೃಷ್ಣ ಸ್ನೇಹ ಬೆಳೆಸಿದ್ದ. ಆ ಸ್ನೇಹ ಅವರ ವಿವಾಹೇತರ ಸಂಬಂಧಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ತನ್ನನ್ನು ಮದುವೆಯಾಗುವಂತೆ ಅಪ್ಸರಾ, ಸಾಯಿಕೃಷ್ಣನನ್ನು ಕೇಳಲಾಂಭಿಸಿದ್ದಳು. ಈಗಾಗಲೇ ಮದುವೆಯಾಗಿದ್ದ ಸಾಯಿಕೃಷ್ಣ, ಅಪ್ಸರಾಳ ಮಾತು ಒಪ್ಪದೇ ದಿನದೂಡುತ್ತಿದ್ದ. ಕೆಲವು ದಿನಗಳ ಹಿಂದೆಯಷ್ಟೇ ಈ ವಿಚಾರವಾಗಿ ಇಬ್ಬರ ನಡುವೆ ಸಣ್ಣಪುಟ್ಟ ಜಗಳವೂ ಆಗಿತ್ತು. ಅಪ್ಸರಾ ಮದುವೆ ವಿಚಾರ ತೆಗೆದಾಗಲೆಲ್ಲ ಸಾಯಿಕೃಷ್ಣ ಜಗಳವಾಡುತ್ತಲೇ ಇದ್ದ. ಒತ್ತಾಯ ಹೆಚ್ಚಾದಾಗ ಸಾಯಿಕೃಷ್ಣ ಆಕೆಯನ್ನು ಕೊಲೆ ಮಾಡುವ ಮೂಲಕ ಜಟಾಪಟಿಗೆ ಪೂರ್ಣವಿರಾಮ ಹಾಕಲು ಹೊಂಚು ಹಾಕಿದ್ದ. ಅಂದುಕೊಂಡಂತೆ ಅದನ್ನು ಮಾಡಿಯೇ ಮುಗಿಸಿದ್ದಾನೆ. ಆದರೆ, ಚಾಣಾಕ್ಷತನ ಮೆರೆದ ಪೊಲೀಸರು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶ ಕಂಡಿದ್ದಾರೆ.
ಭೀಕರವಾಗಿ ಕೊಲೆಗೈದ ಪಾಪಿ: ಸಾಯಿಕೃಷ್ಣ ಎರಡು ದಿನಗಳ ಹಿಂದೆ ಬಣ್ಣ ಬಣ್ಣದ ಮಾತುಗಳನ್ನಾಡಿ ಅಪ್ಸರಾಳನ್ನು ಸರೂರ್‌ನಗರದಿಂದ ಕಾರಿನಲ್ಲಿ ಶಂಶಾಬಾದ್‌ಗೆ ಕರೆದುಕೊಂಡು ಹೋಗಿದ್ದಾನೆ. ನಿರ್ಜನ ಪ್ರದೇಶವಾದ ನರ್ಕುಡದಲ್ಲಿ ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿದ್ದ ಆರೋಪಿ, ಅಪ್ಸರಾಳನ್ನು ಪ್ರಶ್ನೆ ಮಾಡಲಾರಂಭಿಸಿದ್ದಾನೆ. ಮದುವೆ ಆಗಲ್ಲವೆಂದು ಮತ್ತೆ ಜಗಳ ತೆಗೆದಿದ್ದ. ಈ ಜಗಳ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿತ್ತು. ಇದರಿಂದ ಕೆರಳಿದ ಆತ ಅಲ್ಲಿಯೇ ಸಿಕ್ಕ ಕಲ್ಲಿನಿಂದ ಅಪ್ಸರಾಳನ್ನು ಕೊಂದು ಹಾಕಿದ್ದಾನೆ. ಬಳಿಕ ಆಕೆಯ ಶವವನ್ನು ಕವರ್ನಲ್ಲಿ ಕಟ್ಟಿ ಅದೇ ಕಾರಿನಲ್ಲಿ ಸರೂರ್‌ನಗರಕ್ಕೆ ತಂದಿದ್ದ. ಯಾರಿಗೂ ಗೊತ್ತಾಗದಂತೆ ಸ್ಥಳೀಯ ಸರ್ಕಾರಿ ಪದವಿ ಕಾಲೇಜಿನ ಮ್ಯಾನ್ ಹೋಲ್ಗೆ ಆಕೆಯ ಮೃತದೇಹ ಎಸೆದಿದ್ದ. ಅಪ್ಸರಾ ಕಾಣೆಯಾಗಿದ್ದಾಳೆಂದು ನಾಟಕವಾಡಿ ಶಂಶಾಬಾದ್ ಠಾಣೆಯಲ್ಲಿ ದೂರು ಕೂಡ ಕೊಟ್ಟಿದ್ದಾನೆ. ಬಳಿಕ ಎಂದಿನಂತೆ ದೇವಸ್ಥಾನದಲ್ಲಿ ಅರ್ಚಕನಾಗಿ ತನ್ನ ಕೆಲಸ ಆರಂಭಿಸಿದ್ದನು.
''ಸಾಯಿಕೃಷ್ಣ ಎಂಬ ಅರ್ಚಕ ನಮ್ಮ ಬಳಿ ಬಂದು ತನ್ನ ಸಂಬಂಧಿ ಅಪ್ಸರಾ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದನು. ದೂರಿನ ಆಧಾರದ ಮೇಲೆ ನಾವು ತನಿಖೆ ಆರಂಭಿಸಿದ್ದೆವು. ತನಿಖೆಯಲ್ಲಿ ಸಾಯಿಕೃಷ್ಣ ಮತ್ತು ಅಪ್ಸರಾ ನಡುವಿನ ವಿವಾಹೇತರ ಸಂಬಂಧದ ಬಗ್ಗೆ ನಮಗೆ ತಿಳಿದು ಬಂದಿತು. ಸಾಯಿಕೃಷ್ಣನ ಸೆಲ್ ಫೋನ್ ಸಿಗ್ನಲ್ ಮತ್ತು ಕೆಲವು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿದೆವು. ನಮ್ಮ ಅನುಮಾನವೆಲ್ಲ ಸಾಯಿಕೃಷ್ಣನ ಮೇಲೆಯೇ ಬಂದಿತ್ತು. ಠಾಣೆಗೆ ಕೆರೆಸಿ ಪೊಲೀಸ್ ಶೈಲಿಯಲ್ಲಿ ವಿಚಾರಿಸಿದಾಗ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು ಹಾಗಾಗಿ, ಈ ಕಿರುಕುಳ ತಾಳಲಾರದೇ ನಾನೇ ಕೊಲೆ ಮಾಡಿ ಆಕೆಯ ಮೃತದೇಹವನ್ನು ಮ್ಯಾನ್ ಹೋಲ್ಗೆ ಎಸೆದು ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಜೆಸಿಬಿ ಸಹಾಯದಿಂದ ಮೃತದೇಹವನ್ನು ಮ್ಯಾನ್ ಹೋಲ್ನಿಂದ ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಶವಾಗಾರಕ್ಕೆ ರವಾನಿಸಲಾಗಿದೆ. ಈ ಹಿಂದೆ ಅಪ್ಸರಾ ಗರ್ಭಿಣಿಯಾಗಿದ್ದು, ಇದನ್ನು ಮುಚ್ಚಿಟ್ಟಿದ್ದಳಂತೆ. ಗರ್ಭಪಾತ ಮಾಡಿಸಿಕೊಂಡಿದ್ದನ್ನು ಆರೋಪಿ ಸಾಯಿಕೃಷ್ಣ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಆದರೆ, ಗರ್ಭಿಣಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾನೆ. ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಸದ್ಯಕ್ಕೆ ಈ ಕೊಲೆಯ ಹಿಂದೆ ಸಾಯಿಕೃಷ್ಣ ಒಬ್ಬನೇ ಇರುವುದಾಗಿ ಗೊತ್ತಾಗಿದೆ. ಎಲ್ಲದರ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡಲಾಗುವುದು''. - ಪೊಲೀಸ್ ಅಧಿಕಾರಿ
ಇದನ್ನೂ ಓದಿ: ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಯೋಗಾಭ್ಯಾಸ; ಟ್ರಕ್ ಹರಿದು ಮೂವರು ಬಾಲಕರ ದುರ್ಮರಣ