ದೋಡಾ (ಜಮ್ಮು ಮತ್ತು ಕಾಶ್ಮೀರ): ಉತ್ತರಾಖಂಡದ ಜೋಶಿಮಠ ಮತ್ತು ಕರ್ಣಪ್ರಯಾಗದಲ್ಲಿ ಭೂಮಿ ಬಿರುಕು ಬಿಟ್ಟ ನಂತರ ಇದೀಗ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಥಾತ್ರಿ ಎಂಬ ಪ್ರದೇಶದಲ್ಲಿ ಹಲವು ಕಟ್ಟಡಗಳು, ವಸತಿ ಗೃಹಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಶುಕ್ರವಾರದ ಹೊತ್ತಿಗೆ ಸುಮಾರು 15 ಮನೆಗಳಲ್ಲಿ ಬಿರುಕು ಉಂಟಾಗಿದೆ. ಈ ಬೆಳವಣಿಗೆ ಇಲ್ಲಿನ ಜನರಲ್ಲಿ ಜೀವನೋಪಾಯದ ಬಗ್ಗೆ ಆತಂಕ ಹೆಚ್ಚಿಸಿದೆ.
ನಾಲ್ಕು ದಿನಗಳ ಹಿಂದೆ ಥಾತ್ರಿಯ ವಸತಿ ಗೃಹದಲ್ಲಿ ಮೊದಲ ಬಿರುಕು ಕಾಣಿಸಿಕೊಂಡಿತ್ತು ಎಂದು ಸ್ಥಳೀಯ ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ. ಸುರಕ್ಷತಾ ಕ್ರಮವಾಗಿ ಹಲವು ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಘಟನಾ ಸ್ಥಳಕ್ಕೆ ಭೂವಿಜ್ಞಾನಿಗಳು ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಕಾರಣ ಪತ್ತೆ ಹಚ್ಚಲಾಗುತ್ತಿದೆ. ಜೋಶಿಮಠದಲ್ಲಿ ಹಲವಾರು ಮನೆಗಳು ಬಿರುಕು ಬಿಟ್ಟ ವಾರಗಳ ನಂತರ ದೋಡಾದಲ್ಲಿಯೂ ಭೂಕುಸಿತ ಸಂಭವಿಸಿದೆ.
ನೆಲ ಅಗೆಯುವ ಕಾರ್ಯಗಳು ನಡೆಯುತ್ತಿರುವುದು ಹತ್ತಿರದ ಪ್ರದೇಶದಲ್ಲಿ ಭೂಕುಸಿತವಾಗಲು ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದುವರೆಗೂ ಜಿಲ್ಲಾಡಳಿತ ಗಮನಹರಿಸಿಲ್ಲ. ಸುರಕ್ಷತೆಗಾಗಿ ತಮ್ಮ ಸಂಬಂಧಿಕರಿಗೆ ತಾವೇ ಸಂಪರ್ಕಿಸಿದ್ದೇವೆ ಎಂದು ಸಂತ್ರಸ್ತ ಕುಟುಂಬಗಳು ಹೇಳಿವೆ. ಆದರೆ ಸ್ಥಳೀಯ ಆಡಳಿತವು ಬುಲ್ಡೋಜರ್‌ನಿಂದ ನಡೆಯುತ್ತಿರುವ ಉತ್ಖನನ ತುಂಬಾ ಸಣ್ಣ ಮಟ್ಟದ್ದಾಗಿದ್ದು, ಮನೆಗಳಲ್ಲಿ ಬಿರುಕು ಉಂಟುಮಾಡುವುದು, ಭೂಕುಸಿತ ಉಂಟುಮಾಡುವ ಸಾಧ್ಯತೆಯನ್ನು ತಳ್ಳಿಹಾಕಿದೆ. ಈ ಬಗ್ಗೆ ಸ್ಥಳೀಯಾಡಳಿತ ನಿರಾಸಕ್ತಿ ತೋರಿದೆ ಎಂದು ಸಂತ್ರಸ್ತ ಕುಟುಂಬಗಳು ಆರೋಪಿಸಿವೆ.
ದೋಡಾ ಜಿಲ್ಲಾಧಿಕಾರಿ ಅಥರ್ ಅಮೀನ್ ಜರ್ಗರ್ ಮಾತನಾಡಿ, "ದೋಡಾ ಜಿಲ್ಲೆಯಲ್ಲಿ ಡಿಸೆಂಬರ್‌ನಲ್ಲಿ ಮನೆಯೊಂದರಲ್ಲಿ ಬಿರುಕುಗಳು ವರದಿಯಾಗಿದ್ದವು. ನಿನ್ನೆಯವರೆಗೂ ಐದಾರು ಕಟ್ಟಡಗಳು ಬಿರುಕು ಬಿಟ್ಟಿದ್ದು, ಈಗ ಹೆಚ್ಚಾಗತೊಡಗಿವೆ. ಈ ಪ್ರದೇಶ ಕ್ರಮೇಣ ಮುಳುಗುತ್ತಿದೆ. ಸರ್ಕಾರವು ಆದಷ್ಟು ಬೇಗ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ" ಎಂದರು.
ದೋಡಾ ಮತ್ತು ಕಾಶ್ಮೀರದ ಡಿವಿಶನಲ್ ಕಮಿಷನರ್ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಇಂದು ಕಟ್ಟಡಗಳು ಬಿರುಕು ಬಿಟ್ಟ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭೂಕುಸಿತದ ಕಾರಣವನ್ನು ಕಂಡುಹಿಡಿಯಲು ಮತ್ತು ಪರಿಹಾರ ಕ್ರಮಗಳನ್ನು ಸೂಚಿಸಲು ಸ್ಥಳವನ್ನು ಪರೀಕ್ಷಿಸಲು ದೋಡಾ ಜಿಲ್ಲಾಡಳಿತ ಜಮ್ಮುವಿನಿಂದ ಭೂವೈಜ್ಞಾನಿಕ ತಜ್ಞರನ್ನು ಸಹ ಕಳುಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಅಪಾಯದಂಚಿನಲ್ಲಿ ಜೋಶಿಮಠ: ಮುಳುಗುತ್ತಿರುವ ಜೋಶಿಮಠದ ಉಪಗ್ರಹ ಚಿತ್ರಗಳು ಭೂಮಿ ಕುಸಿತದಿಂದ ಪಟ್ಟಣವು ಹೇಗೆ ಕ್ರಮೇಣ ಕುಸಿಯುತ್ತಿದೆ ಎಂಬುದನ್ನು ತೋರಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್ ಬಿಡುಗಡೆ ಮಾಡಿದ ಚಿತ್ರಗಳು, ಡಿಸೆಂಬರ್ 27, 2022 ರಿಂದ ಜನವರಿ 8, 2023 ರ ನಡುವೆ 12 ದಿನಗಳಲ್ಲಿ 5.4 ಸೆಂ.ಮೀ ವೇಗದ ಕುಸಿತ ದಾಖಲಾಗಿರುವುದನ್ನು ಬಹಿರಂಗಪಡಿಸಿದೆ. ಜೋಶಿಮಠದ ಹಲವಾರು ಮನೆಗಳ ಗೋಡೆಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೋಶಿಮಠದಲ್ಲಿ ವಾಸಿಸುತ್ತಿದ್ದ ಒಟ್ಟು 169 ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕೆಲವು ಕಟ್ಟಡಗಳು ಈಗಾಗಲೇ ಕುಸಿದಿದ್ದು, ಇನ್ನು ಕೆಲವು ಹೆಚ್ಚು ಅಪಾಯದ ಮಟ್ಟದಲ್ಲಿರುವ ಕಟ್ಟಡಗಳನ್ನು ಅಧಿಕಾರಿಗಳು ಕೆಡವುವ ಹಂತದಲ್ಲಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ: ಜೋಶಿಮಠ-ನೀತಿ ಕಣಿವೆ ಗಡಿ ಬಂದ್