ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಡಿಎಂಕೆ - ಕಾಂಗ್ರೆಸ್ ಮೈತ್ರಿಯಲ್ಲಿ ಒಡಕು ಉಂಟಾಗಿದೆ. ಇತ್ತೀಚೆಗಷ್ಟೇ ಕಮಲ್ ಹಾಸನ್ ಸ್ಥಾಪಿಸಿರುವ ಎಂಎನ್‌ಎಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಆಸಕ್ತಿ ತೋರುತ್ತಿದೆ ಎನ್ನಲಾಗಿದೆ.
ಟಿಎನ್ಸಿಸಿ ಅಧ್ಯಕ್ಷ ಕೆ.ಎಸ್.ಅಲಗಿರಿ, ಜಾತ್ಯಾತೀತ ಶಕ್ತಿಗಳನ್ನು ಬಲಪಡಿಸಲು ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿಕೂಟಕ್ಕೆ ಎಂಎನ್ಎಂಗೆ ಬಹಿರಂಗ ಆಹ್ವಾನ ನೀಡಿದ್ದರು. ಈ ಬೆನ್ನಲ್ಲೇ ಡಿಎಂಕೆ ದೋಸ್ತಿಯಿಂದ ಹಿಂದೆ ಸರಿಯಲು ಮುಂದಾಗಿದೆ.
ಸೀಟು ಹಂಚಿಕೆ ವಿಚಾರವಾಗಿಯೂ ಡಿಎಂಕೆ ಹಾಗೂ ಕಾಂಗ್ರೆಸ್ ನಡುವೆ ಬಿರುಕು ಮೂಡಿರುವುದರಿಂದ ಕಾಂಗ್ರೆಸ್ ಕಮಲ್ ಪಕ್ಷಕ್ಕೆ ಮಣೆ ಹಾಕಲು ಮುಂದಾಗಿದೆ.
ವಾರದ ಹಿಂದಷ್ಟೇ ನಡೆದ ಸಭೆಯೊಂದರಲ್ಲಿ ಡಿಎಂಕೆ ಮುಖಂಡ, ಕೇಂದ್ರದ ಮಾಜಿ ಸಚಿವ ಜಗತ್ರತ್ಚಗನ್, ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 30 ಸ್ಥಾನಗಳಿಗೂ ಸ್ಪರ್ಧಿಸುವುದಾಗಿ ಹೇಳಿದ್ದರು. ಅಲ್ಲದೆ ಮೈತ್ರಿಯಿಂದ ಹೊರಬಂದು ಪಿಎಂಕೆ ಜತೆ ಸೇರಲು ಯೋಚಿಸಿರುವುದಾಗಿಯೂ ಹೇಳಿದ್ದರು.
ತಮಿಳುನಾಡಿನಲ್ಲಿ ಕಾಂಗ್ರೆಸ್ಗೆ ನೆಲೆಯಿಲ್ಲ. ತನ್ನ ನೆಲೆ ಕಂಡುಕೊಳ್ಳಲು ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಅನಿವಾರ್ಯ. ಹಾಗಾಗಿ ಎಂಎನ್‌ಎಂ ಜತೆ ಕೈ ಜೋಡಿಸಲು ಮುಂದಾಗಿದೆ.
ಎಂಎನ್‌ಎಂ ಜಾತ್ಯಾತೀತ ಪಕ್ಷವಾಗಿರುವುದರಿಂದ ನಮ್ಮ ಜತೆ ಕೈ ಜೋಡಿಸಲು ಆಹ್ವಾನಿಸುತ್ತಿದ್ದೇನೆ ಅಂತಾರೆ ಅಲಗಿರಿ.
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಡಿಎಂಕೆಯು ಕಾಂಗ್ರೆಸ್ನ ಮೈತ್ರಿಕೂಟದ ಭಾಗವಾಗಿಯೇ ಇರಬೇಕೆಂದು ಆಗ್ರಹಸಿದ್ದಾರೆ. ಅಲ್ಲದೆ ಎಂಎನ್‌ಎಂ ರಾಜಕೀಯದಲ್ಲಿ ಸ್ವತಂತ್ರವಾಗಿ ಹೆಸರು ಮಾಡಲು ಬಹಳಷ್ಟು ವರ್ಷಗಳು ಬೇಕಾಗುತ್ತವೆ. ಹಾಗಾಗಿ ಕಾಂಗ್ರೆಸ್, ಡಿಎಂಕೆ ಜತೆ ಎಂಎನ್‌ಎಂ ಸೇರಿದರೆ ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಂಎನ್‌ಎಂ ವಕ್ತಾರ ಮುರಳಿ ಅಬ್ಬಾಸ್, ರಾಜ್ಯದಲ್ಲಿ ದ್ರಾವಿಡ ಪಕ್ಷಗಳಿಗೆ ಮೈತ್ರಿ ಮಾಡಿಕೊಳ್ಳಲು ಪರ್ಯಾಯ ಪಕ್ಷದ ಅವಶ್ಯಕತೆಯಿದೆ. ಪ್ರಸ್ತುತ ರಾಜಕೀಯದಲ್ಲಿ ಕಾಂಗ್ರೆಸ್, ಎಂಎನ್‌ಎಂ ಮಹತ್ವವನ್ನು ತಿಳಿದುಕೊಂಡಿದೆ ಎಂದರು. ಈ ಮಧ್ಯೆ ಡಿಎಂಕೆ ಅಥವಾ ಎಐಎಡಿಎಂಕೆ ಜೊತೆ ಯಾವುದೇ ಸಂಬಂಧವಿಲ್ಲ. ನಾವು ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಇಷ್ಟ ಪಡಲ್ಲ ಎಂದು ಸ್ಪಷ್ಟಪಡಿಸಿದರು.