ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಒಂದಾಗಿ ಹೋರಾಡುವ ಉದ್ದೇಶದಿಂದ ಪ್ರತಿಪಕ್ಷಗಳು ರಚಿಸಿಕೊಂಡಿರುವ 'ಇಂಡಿಯಾ' ಮೈತ್ರಿಕೂಟದಲ್ಲಿ ಬಿರುಕಿನ ಲಕ್ಷಣಗಳು ಗೋಚರಿಸಿವೆ. ಕಾಂಗ್ರೆಸ್ ಮತ್ತು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಅದರ ನಡೆ ವಿರುದ್ಧ ಹಲವು ಪಕ್ಷಗಳು ಬಹಿರಂಗವಾಗಿ ಧ್ವನಿ ಎತ್ತಿವೆ. ಇದರಿಂದ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಗಳು ಮತ್ತಷ್ಟು ಹೆಚ್ಚಾಗಿವೆ.
ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಸಂಯುಕ್ತ ಜನತಾ ದಳ (ಜೆಡಿಯು)ದಂತಹ ಪಕ್ಷಗಳು ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ಇತರ ಪಕ್ಷಗಳನ್ನು ಬದಿಗೊತ್ತಿದ ಕಾಂಗ್ರೆಸ್ ತಂತ್ರವನ್ನು ಟೀಕಿಸಿವೆ. ಈ ಬಗ್ಗೆ ಎಸ್‌ಪಿ ವಕ್ತಾರ ಅಖಿಲೇಶ್ ಕಟಿಯಾರ್ 'ಈಟಿವಿ ಭಾರತ್'ಗೆ ಪ್ರತಿಕ್ರಿಯಿಸಿ, ''ಸದ್ಯ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೊಡಗಿರುವ ರೀತಿ 'ಇಂಡಿಯಾ' ಮೈತ್ರಿಗೆ ಒಳ್ಳೆಯದಲ್ಲ. ಬಿಜೆಪಿ ವಿರುದ್ಧ ಹೋರಾಡುತ್ತಿರುವ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಕಾಂಗ್ರೆಸ್ ಗಣನೆಗೆ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಮೈತ್ರಿಕೂಟದ ಎಲ್ಲ ಪಾಲುದಾರರೊಂದಿಗೆ ಸಮಾಲೋಚಿಸಬೇಕು'' ಎಂದು ತಿಳಿಸಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿತ್ತು. ಶಾಸಕರ ವಲಸೆಯಿಂದ ಮಧ್ಯಪ್ರದೇಶ ಸರ್ಕಾರ ಪತನವಾಗಿತ್ತು. ಈಗ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷವು ಕಾಂಗ್ರೆಸ್ ಮತ್ತು ಅದರ ವಿಧಾನದ ವಿರುದ್ಧ ಸಾಕಷ್ಟು ಧ್ವನಿಯೆತ್ತಿದೆ.
''ಈಗ ಪರಿಸ್ಥಿತಿ ಬದಲಾಗಿದೆ. ಈ ಪರಿಸ್ಥಿತಿಗೆ ಕಾಂಗ್ರೆಸ್ ಮಾತ್ರ ಹೊಣೆ. ಅತಿದೊಡ್ಡ ಪಾಲುದಾರರಾಗಿರುವ ಕಾಂಗ್ರೆಸ್, ಇತರ ಎಲ್ಲ ಪಕ್ಷಗಳನ್ನು ಒಟ್ಟಿಗೆ ತೆಗೆದುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ದುರದೃಷ್ಟವಶಾತ್, ಕಾಂಗ್ರೆಸ್ ಆ ವಿಧಾನವನ್ನು ತೋರಿಸುತ್ತಿಲ್ಲ'' ಎಂದು ಕಟಿಯಾರ್ ಟೀಕಿಸಿದರು. ಇದೇ ಅಭಿಪ್ರಾಯವನ್ನು ಜೆಡಿಯು ವಕ್ತಾರ ನೀರಜ್ ಕುಮಾರ್ ಕೂಡ ವ್ಯಕ್ತಪಡಿಸಿದ್ದು, ''ಮೋದಿ ಮತ್ತು ಬಿಜೆಪಿ ವಿರೋಧಿ ಶಕ್ತಿಗಳು ಗರಿಷ್ಠ ಹೊಂದಾಣಿಕೆಯೊಂದಿಗೆ ಒಂದಕ್ಕೊಂದು ಹೋರಾಟ ನಡೆಸಬೇಕಿದೆ'' ಎಂದು ಹೇಳಿದರು.
ಇದನ್ನೂ ಓದಿ: 'ಭಾರತ ವಿಶ್ವಕಪ್ ಗೆಲ್ಲುತ್ತಿತ್ತು, ಅಲ್ಲಿದ್ದ ಕೆಟ್ಟ ಶಕುನದಿಂದ ಸೋತಿತು': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ
''ನಮ್ಮ ನಾಯಕ ನಿತೀಶ್ ಕುಮಾರ್ ಈಗಾಗಲೇ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಸಭೆಯಲ್ಲಿ ಪಕ್ಷಗಳು ಇಂಡಿಯಾ ಮೈತ್ರಿಯ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ. ಸದ್ಯಕ್ಕೆ ಹೆಚ್ಚು ಸಮಯವಿಲ್ಲ. ಕಾಂಗ್ರೆಸ್ ಪಕ್ಷವೇ ಮುಂದೆ ಬರಬೇಕು. ಈಗ ಕಾಂಗ್ರೆಸ್ ಮೇಲೆಯೇ ಅವಲಂಬಿತವಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿಯಲಿ. ತದನಂತರ ಅದು ಹೇಗೆ ಮುಂದುವರಿಯುತ್ತದೆ ಎಂಬುದನ್ನು ನೋಡಬೇಕು. ನಾವು 2024ರ ಚುನಾವಣೆಯಲ್ಲಿ ಗೆಲ್ಲಬೇಕಾದರೆ, ನಾವು ಬಿಜೆಪಿಯನ್ನು ಸೋಲಿಸುವ ಏಕೈಕ ಮಾರ್ಗದೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು'' ಎಂದು ನೀರಜ್ ಕುಮಾರ್ ತಿಳಿಸಿದರು.
'ಇಂಡಿಯಾ' ಮೈತ್ರಿಕೂಟದ ಮತ್ತೊಂದು ಪಕ್ಷವಾದ ಸಿಪಿಐಎಂ, ವಿಧಾನಸಭಾ ಚುನಾವಣೆಯು ಸಾರ್ವತ್ರಿಕ ಚುನಾವಣೆಗಿಂತ ಭಿನ್ನ ಎಂದು ಹೇಳಿದೆ. ''ನಾವು ಒಗ್ಗೂಡಿದ್ದರೂ, ರಾಜ್ಯ ಚುನಾವಣೆಯಲ್ಲಿಯೂ ಎಲ್ಲ ಪಕ್ಷಗಳು ಒಂದೇ ವೇದಿಕೆಯಡಿ ನಿಲ್ಲುವುದು ಸಾಧ್ಯವಿಲ್ಲ. ರಾಜ್ಯ ಮತ್ತು ಲೋಕಸಭೆ ಚುನಾವಣೆಗಳು ಎರಡು ಭಿನ್ನ. ಮೋದಿ ಮತ್ತು ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ನಾವು ಒಗ್ಗಟ್ಟಿನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಂದೇ ವೇದಿಕೆಯಡಿ ಬಂದಿದ್ದೇವೆ. 'ಇಂಡಿಯಾ' ಮೈತ್ರಿಕೂಟದ ಪಾಲುದಾರರು ಒಟ್ಟಾಗಿದ್ದಾರೆ'' ಎಂದು ಮಾಜಿ ಸಂಸದ, ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಹನ್ನನ್ ಮೊಲ್ಲಾ ವಿಶ್ವಾಸ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯೆಗೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರನ್ನು ಸಂಪರ್ಕಿಸಿದಾಗ ಅವರು, ಬಹುತೇಕ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವುದಾಗಿ ಎಂದು ಒಪ್ಪಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಮಾತ್ರ, ನಾವು ರಾಷ್ಟ್ರೀಯ ಲೋಕದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಆ ಮುಖಂಡ ತಿಳಿಸಿದರು. ಆದರೆ, ''ಐದು ರಾಜ್ಯಗಳ ರಾಜ್ಯ ಚುನಾವಣೆ ಮುಗಿಯಲಿ. ಎಲ್ಲ ನಾಯಕರು ಒಟ್ಟಾಗಿ ಕುಳಿತು 2024ರ ಚುನಾವಣೆಗೆ ತಂತ್ರಗಳನ್ನು ರೂಪಿಸುತ್ತಾರೆ ಎಂದು ನಾನು ನಂಬಿದ್ದೇನೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ'' ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಸಂಸದ ಅಬ್ದುಲ್ ಖಲೀಕ್ ಅಭಿಪ್ರಾಯಪಟ್ಟರು.
2024ರ ಲೋಕಸಭೆ ಚುನಾವಣೆಗೆ ಮುನ್ನ ಸೆಮಿಫೈನಲ್ ಎಂದೇ ಪರಿಗಣಿಸಲಾಗಿರುವ ಮಿಜೋರಾಂ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಈಗಾಗಲೇ ಮತದಾನ ಮುಗಿದಿದೆ. ರಾಜಸ್ಥಾನದಲ್ಲಿ ನವೆಂಬರ್ 25ರಂದು ಹಾಗೂ ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಎಲ್ಲ ಐದು ರಾಜ್ಯಗಳ ಮತ ಎಣಿಕೆ ಡಿಸೆಂಬರ್ 3ರಂದು ಜರುಗಲಿದೆ.
ಇದನ್ನೂ ಓದಿ: 752 ಕೋಟಿ ರೂಪಾಯಿ ಮೌಲ್ಯದ ನ್ಯಾಷನಲ್ ಹೆರಾಲ್ಡ್ ಆಸ್ತಿ ಜಪ್ತಿ ಮಾಡಿದ ಇಡಿ