ಚೈಬಾಸಾ (ಜಾರ್ಖಂಡ್): ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ) ಗುಂಪೊಂದು ಗುರುವಾರ ಕಂಪನಿಯೊಂದರ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ದೋಚಿದ ಘಟನೆ ಜಾರ್ಖಂಡ್‌ನ ಚೈಬಾಸಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಪರಂಬಲಜೋಡಿ ಗ್ರಾಮದ ಸಮೀಪವಿರುವ ಡಿಕೆ ಘೋಷ್ ಕಂಪನಿಗೆ ಸೇರಿದ ಸ್ಫೋಟಕಗಳನ್ನು ನಕ್ಸಲರು ಲೂಟಿ ಮಾಡಿದ್ದಾರೆ.
ಕಾಡಿನಲ್ಲಿ ಕಂಪನಿಯ ಗೋದಾಮು ಇದ್ದು, ಸ್ಫೋಟಕಗಳನ್ನು ಸಂಗ್ರಹಿಸಲಾಗಿತ್ತು. ಇದನ್ನು ಅರಿತ ಮಾವೋವಾದಿಗಳು ಗೋದಾಮಿನ ಮೇಲೆ ದಾಳಿ ಮಾಡಿದ್ದಾರೆ. ಅಪಾರ ಪ್ರಮಾಣದ ಡಿಟೋನೇಟರ್‌ಗಳು ಮತ್ತು ಸ್ಫೋಟಕಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಸ್ಫೋಟಕಗಳನ್ನು ಗಣಿಗಾರಿಕೆ ಉದ್ದೇಶಕ್ಕಾಗಿ ಕಂಪನಿಯ ಗೋದಾಮಿನಲ್ಲಿ ಸಂಗ್ರಹಿಸಲಾಗಿತ್ತು ಎಂದು ತಿಳಿದು ಬಂದಿದೆ.
ಗುರುವಾರ ರಾಮನವಮಿ ಮೆರವಣಿಗೆ ಇದ್ದ ಕಾರಣ ಎಲ್ಲ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದರು. ಅಂತೆಯೇ, ಇದೇ ಸಮಯ ಸಾಧಿಸಿದ ಮಾವೋವಾದಿಗಳು ಗೋಡೌನ್ಗೆ ಲಗ್ಗೆ ಇಟ್ಟಿದ್ದಾರೆ. ಪಶ್ಚಿಮ ಸಿಂಗ್‌ಭೂಮ್ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಈ ಘಟನೆಯನ್ನು ಖಚಿತಪಡಿಸಿದ್ದಾರೆ.
ಡಿಕೆ ಘೋಷ್ ಕಂಪನಿಯು ಗಣಿಗಾರಿಕೆ ಉದ್ದೇಶಗಳಿಗಾಗಿ ಸ್ಫೋಟಕಗಳು ಮತ್ತು ಡಿಟೋನೇಟರ್‌ಗಳ ಪೂರೈಕೆದಾರ ಕಂಪನಿಯಾಗಿದೆ. ನಕ್ಸಲರು ಸ್ಫೋಟಕಗಳ ಲೂಟಿ ಮಾಡಿದ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ಆದರೆ, ಎಷ್ಟು ಸ್ಫೋಟಕ ವಸ್ತುಗಳನ್ನು ದೋಚಲಾಗಿದೆ ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ:ಮನೆಯಲ್ಲಿ ಭೀಕರ ಸ್ಫೋಟ: ನಾಲ್ವರ ಸಾವು, 2 ಕಿಮೀವರೆಗೂ ಕೇಳಿಸಿದ ಸ್ಫೋಟದ ಸದ್ದು