ನವದೆಹಲಿ : ಭಾರತದಲ್ಲಿ ಮತ್ತೆ ದಾಖಲೆ ಮಟ್ಟದಲ್ಲಿ ಕೋವಿಡ್ 19 ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದೊಂದು ದಿನದಲ್ಲಿ ಬರೋಬ್ಬರಿ 12,591 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದು ಎಂಟು ತಿಂಗಳ ಬಳಿಕ ಪತ್ತೆಯಾದ ಅಧಿಕ ಕೇಸ್ಗಳಾಗಿವೆ. ಸದ್ಯಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ 65,286 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದೊಂದು ದಿನದಲ್ಲಿ ಪತ್ತೆಯಾದ ಸೋಂಕಿತರು ಸೇರಿದಂತೆ ಇದುವರೆಗೆ 4.48 ಕೋಟಿ (44,857,992) ಮಂದಿಗೆ ಸೋಂಕು ತಗುಲಿದೆ. ಒಟ್ಟು ಸಾವಿನ ಸಂಖ್ಯೆ 5,31,230 ಕ್ಕೆ ತಲುಪಿದೆ. ದೇಶದಲ್ಲಿ ಸದ್ಯಕ್ಕೆ ಸಾವಿನ ಪ್ರಮಾಣ ಶೇ 1.18 ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಶೇಕಡಾ 5.46 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇಕಡಾ 5.32 ಇದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ 98.67 ಪ್ರತಿಶತದಷ್ಟು ದಾಖಲಾಗಿದೆ. ಇದುವರೆಗೂ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,42,61,476 ಕ್ಕೆ ತಲುಪಿದೆ. ಕೇಂದ್ರ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದ ಅಡಿ ಇದುವರೆಗೆ ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕಾ ಡೋಸ್ ನೀಡಲಾಗಿದೆ.
ಇನ್ನು ನವದೆಹಲಿಯಲ್ಲಿ ಕಳೆದೊಂದು ದಿನದಲ್ಲಿ 1,757 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾಂಕ್ರಾಮಿಕ ರೋಗದಿಂದ ಸಾವನ್ನಪಿರುವವರ ಸಂಖ್ಯೆ ದೆಹಲಿಯಲ್ಲಿ 26,578 ಕ್ಕೆ ಏರಿದೆ. ಸದ್ಯಕ್ಕೆ 28.63 ರಷ್ಟು ಪಾಸಿಟಿವಿಟಿ ದರವಿದೆ. ಕಳೆದ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ 1,537 ಹೊಸ ಕೋವಿಡ್-19 ಪ್ರಕರಣಗಳು ಕಂಡುಬಂದಿದ್ದವು, ಸೋಮವಾರ 1,017 ಕೋವಿಡ್ ಕೇಸ್ಗಳು ಪತ್ತೆಯಾಗಿದ್ದವು. ನಗರದಲ್ಲಿ ಕಳೆದ 15 ದಿನಗಳಿಂದ ಕೇಸ್ಗಳು ಹೆಚ್ಚಾಗುತ್ತಿದ್ದು, ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 6,046 ಇದೆ.
ಮುಂಬೈನಲ್ಲಿ ಬುಧವಾರ 234 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 11,61,136 ಕ್ಕೆ ತಲುಪಿದೆ ಎಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ. ನಿನ್ನೆ ದೀರ್ಘಕಾಲದಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ 73 ವರ್ಷದ ಪುರುಷ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 19,755 ಕ್ಕೆ ಏರಿದೆ. ಹಾಗೆಯೇ, ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಮಹಾರಾಷ್ಟ್ರ ರಾಜ್ಯದಲ್ಲಿ 1,100 ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,102 ಕ್ಕೆ ತಲುಪಿದ್ದು, ರಾಜ್ಯದ ಕೋವಿಡ್ -19 ಪ್ರಕರಣಗಳ ಸಂಖ್ಯೆ 81,58,393 ಕ್ಕೆ ಏರಿದೆ. ಸಾವಿನ ಸಂಖ್ಯೆ 1,48,489 ಕ್ಕೆ ತಲುಪಿದೆ.
ಇದನ್ನೂ ಓದಿ : ಕೋವಿಡ್ ತೀವ್ರತೆ ವಿರುದ್ಧ ಹೋರಾಡುತ್ತದೆ ಭಾರತೀಯ ಟೀ ಮತ್ತು ಅರಿಶಿಣ
ರಾಜನಾಥ್ ಸಿಂಗ್ಗೆ ಕೋವಿಡ್ ಪಾಸಿಟಿವ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದ್ದು, ಪ್ರಸ್ತುತ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಇಂದು ನವದೆಹಲಿಯಲ್ಲಿ ನಡೆಯಲಿರುವ ಭಾರತೀಯ ವಾಯುಪಡೆಯ ಕಮಾಂಡರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಲು ನಿರ್ಧರಿಸಿದ್ದರು. ಆದರೆ, ಸೋಂಕು ದೃಢಪಟ್ಟ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.