ನವದೆಹಲಿ: ಭಾರತವು ತನ್ನ ಮೂರನೇ ಹಂತದ ಕೊರೊನಾ ವ್ಯಾಕ್ಸಿನೇಷನ್ ಡ್ರೈವ್ಅನ್ನು ಮೇ 1ರಂದು ಆರಂಭಿಸಲಿದ್ದು, ಅಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು. ಇದಕ್ಕಾಗಿ ಏಪ್ರಿಲ್ 28ರಿಂದ ನೋಂದಣಿ ಆರಂಭವಾಗಲಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, cowin.gov.inನಲ್ಲಿ ನೋಂದಣಿ ಮಾಡಬಹುದು. ಈ ಬಗ್ಗೆ ಸಚಿವಾಲಯವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ದೇಶದಲ್ಲಿ ಕೊರೊನಾ ವೈರಸ್ ವ್ಯಾಕ್ಸಿನೇಷನ್ ಡ್ರೈವ್ಅನ್ನು ಹೆಚ್ಚಿಸುವ ಸಲುವಾಗಿ, ಭಾರತ ಸರ್ಕಾರವು ಏಪ್ರಿಲ್ 19ರಂದು ಮೇ 1ರಿಂದ ಕೊರೊನಾ ವ್ಯಾಕ್ಸಿನೇಷನ್‌ನ ಮೂರನೇ ಹಂತವನ್ನು ಆರಂಭಿಸುವುದಾಗಿ ಘೋಷಿಸಿತು. 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರ ತಿಳಿಸಿದೆ.
ಇಂದು ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಜನವರಿ 16ರಂದು ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾದಾಗಿನಿಂದ 14,09,16,417 ಲಸಿಕೆ ನೀಡಲಾಗಿದೆ.