ನವದೆಹಲಿ: ದೇಶಾದ್ಯಂತ ಕೋವಿಡ್ ಎರಡನೇ ಅಲೆ ಉಲ್ಬಣಗೊಂಡಿದ್ದು, ಪ್ರಕರಣಗಳು ಹೆಚ್ಚಾಗಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಭೆ ನಡೆಸಿ, ಚರ್ಚಿಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಕೇರಳ, ದೆಹಲಿ ಸೇರಿದಂತೆ 10 ರಾಜ್ಯಗಳಲ್ಲಿ ಶೇ. 70ರಷ್ಟು ಹೊಸ ಸೋಂಕಿತರು ಪತ್ತೆಯಾಗುತ್ತಿದ್ದು, ಈ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಪಿಎಂ ಮೋದಿ, ಅಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ: ಪಿಎಂ ಮೋದಿಗೆ ಸಿಎಂ ಬಿಎಸ್ವೈ ಭರವಸೆ
ಕೊರೊನಾ ನಿಯಂತ್ರಣಕ್ಕೆ ಎಲ್ಲ ರೀತಿಯ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಲ್ಕೈದು ದಿನಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದು ಪ್ರಧಾನಿ ಮೋದಿಗೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಆಕ್ಸಿಜನ್ ಕೊರತೆಯಿಂದಾಗುತ್ತಿರುವ ಸಮಸ್ಯೆಯನ್ನು ಒತ್ತಿ ಹೇಳಿದ್ದಾರೆ.
ದೇಶದಲ್ಲಿ ಗುರುವಾರ ಒಂದೇ ದಿನ 3,32,730 ಹೊಸ ಕೋವಿಡ್ ಕೇಸ್ಗಳು ವರದಿಯಾಗಿದ್ದು, 2,263 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲೀಗ ಕೋವಿಡ್ ಕೇಸ್ಗಳ ಸಂಖ್ಯೆ 1,62,63,695 ಹಾಗೂ ಸಾವಿನ ಸಂಖ್ಯೆ 1,86,920ಕ್ಕೆ ಏರಿಯಾಗಿದೆ.