ಹೈದರಾಬಾದ್: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಕಲಿ ಕೋವಿಡ್ ಔಷಧಗಳು ಮತ್ತು ನಕಲಿ ಕೋವಿಡ್ ಪರೀಕ್ಷಾ ವರದಿಗಳು ಹೆಚ್ಚಾಗಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎನ್ನಲಾಗಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ತುರ್ತು ಔಷಧಿಯಾಗಿ ಬಳಸುವುದರಿಂದ ರೆಮ್ಡೆಸಿವಿರ್ಗೆ ದೇಶಾದ್ಯಂತ ಹೆಚ್ಚಿನ ಬೇಡಿಕೆಯಿದೆ. ಇದನ್ನೇ ಬಳಸಿಕೊಂಡ ಹಲವಾರು ಗ್ಯಾಂಗ್‌ಗಳು ನಕಲಿ ಔಷಧಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ತೆಲಂಗಾಣ ಪೊಲೀಸರು ಇತ್ತೀಚೆಗೆ ಕಾರ್ಯಾಚರಣೆಯೊಂದರಲ್ಲಿ ಒಂಬತ್ತು ಮಂದಿಯನ್ನು ಬಂಧಿಸಿ, ನಕಲಿ ಚುಚ್ಚುಮದ್ದನ್ನು ವಶಕ್ಕೆ ಪಡೆದಿದ್ದಾರೆ. ಕೇವಲ 3,490 ರೂಪಾಯಿ ಇರುವ ಒಂದು ಗ್ಲೂಕೋಸ್ ಬಾಟಲ್ ಅನ್ನು 35 ಸಾವಿರ ರೂಪಾಯಿಯಿಂದ 40 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಉಚಿತ ವ್ಯಾಕ್ಸಿನೇಷನ್ಗೆ ಭಾರತ್ ಬಯೋಟೆಕ್ ಬೆಂಬಲ
ಕೆಲವು ವೈದ್ಯಕೀಯ ಅಂಗಡಿಗಳು ತಮ್ಮಲ್ಲಿರುವ ಸ್ಟಾಕ್ ಬಗ್ಗೆ ಮಾಹಿತಿ ಬಹಿರಂಗ ಮಾಡುತ್ತಿಲ್ಲ. ಆದರೆ, ಔಷಧವನ್ನು ಅತಿಯಾದ ಬೆಲೆಗೆ ಮಾರಾಟ ಮಾಡುತ್ತಿವೆ. ಕೋವಿಡ್ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ಮೇಲೆ ಆಂಧ್ರ ಪ್ರದೇಶ ರಾಜಕಾರಣಿಗಳ ಪ್ರಭಾವವಿದ್ದು, ಒತ್ತಡ ಹೇರಲಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.
ಔಷಧ ಕಾನೂನು ಬಾಹಿರವಾಗಿ ಮಾರಾಟವಾಗದಂತೆ ತಡೆಯಲು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಆಂಧ್ರ ಪ್ರದೇಶ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಸಿಂಘಾಲ್ ಆದೇಶ ಹೊರಡಿಸಿದ್ದು, ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಈ ಆದೇಶದಲ್ಲಿ ರಾಜ್ಯದಲ್ಲಿ 32,810 ಡೋಸ್ ರೆಮ್ಡೆಸಿವಿರ್ ಲಭ್ಯವಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ. ಹೆಚ್ಚಿನ ಬೇಡಿಕೆ ಇರುವ ಕಾರಣದಿಂದ ಔಷಧ ಪ್ರಾಧಿಕಾರ ಈ ಕುರಿತು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.