ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಎರಡನೇ ಅಲೆಯ ಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಕರೆದಿರುವ ಸುಪ್ರೀಂಕೋರ್ಟ್, ಇಂಟರ್ನೆಟ್ನಲ್ಲಿ ಸಹಾಯಕ್ಕಾಗಿ ಮೊರೆ ಇಡುತ್ತಿರುವವರನ್ನು ಯಾವುದೇ ಕಾರಣಕ್ಕೂ ಕಡೆಗಣಿಸದಂತೆ ಕೇಂದ್ರ ಸರ್ಕಾರ ಹಾಗೂ ಆಯಾ ಪ್ರದೇಶಗಳ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಸರಾಗ ಮಾಹಿತಿ ಪ್ರಚಾರಕ್ಕೆ ಯಾವುದೇ ರೀತಿಯಿಂದ ತಡೆ ಒಡ್ಡುವಿಕೆಯನ್ನು ಹಾಗೂ ಸಹಾಯಕ್ಕಾಗಿ ಮೊರೆ ಇಟ್ಟವರನ್ನು ನಿರ್ಬಂಧಿಸುವ ಕ್ರಮಗಳನ್ನು ನ್ಯಾಯಾಲಯದ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ಎಸ್.ರವೀಂದ್ರ ಭಟ್ ಅವರಿದ್ದ ಪೀಠ ಈ ಮಹತ್ವದ ಸೂಚನೆ ಜಾರಿಗೊಳಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ, ತಾವು ನ್ಯಾಯಾಲಯದ ಅಧಿಕಾರಿಯಾಗಿ ನ್ಯಾಯಾಲಯದ ಸೂಚನೆಯನ್ನು ಮಾನ್ಯ ಮಾಡುವುದಾಗಿ ಹೇಳಿದರು.
ಸೋಷಿಯಲ್ ಮೀಡಿಯಾಗಳಲ್ಲಿ ಕೋವಿಡ್ ಕುರಿತಾಗಿ ಸುಳ್ಳು ಮಾಹಿತಿ ಹರಡುವವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲು ಉತ್ತರ ಪ್ರದೇಶ ಸರ್ಕಾರವು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸುಪ್ರೀಂಕೋರ್ಟ್ ಸೂಚನೆಯು ಮಹತ್ವ ಪಡೆದುಕೊಂಡಿದೆ.
ಕೋವಿಡ್-19 ಬಿಕ್ಕಟ್ಟಿನಲ್ಲಿ ಜನತೆಗೆ ಅಗತ್ಯ ಸಾಮಗ್ರಿಗಳ ಪೂರೈಕೆ ಪರಿಶೀಲನೆಗಾಗಿ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಈ ಸೂಚನೆಗಳನ್ನು ಜಾರಿ ಮಾಡಿದೆ.
"ದೂರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಮಾಜದ ಕೆಳಸ್ತರದ ಹಾಗೂ ಎಸ್ಸಿ ಎಸ್ಟಿ ಸಮುದಾಯದ ಜನತೆ ವ್ಯಾಕ್ಸಿನ್ ಪಡೆಯವುದು ಹೇಗೆ? ಖಾಸಗಿ ಆಸ್ಪತ್ರೆಗಳ ಮರ್ಜಿಯಂತೆ ಅವರು ನರಳಲು ಬಿಡಬೇಕೆ? ಅವರು ವ್ಯಾಕ್ಸಿನ್ಗಾಗಿ ಹಣ ಹೊಂದಿಸಲು ಸಾಧ್ಯವಾಗದಿರಬಹುದು. ಹೀಗಾಗಿ ಕೇಂದ್ರ ಸರ್ಕಾರವು ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡುವುದು ಒಳ್ಳೆಯದು." ಎಂದು ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿತು.