ನವದೆಹಲಿ : ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬೆನ್ನಲ್ಲೇ ಇದೀಗ ಭಾರತ್ ಬಯೋಟೆಕ್ ಕೂಡ ವಿದೇಶಗಳಿಗೆ ಕೋವ್ಯಾಕ್ಸಿನ್ ಲಸಿಕೆ ರಫ್ತು ಆರಂಭ ಮಾಡಿದೆ. ಕಳೆದ ಮೂರು ದಿನಗಳ ಹಿಂದೆ ಕೇಂದ್ರ ಸರ್ಕಾರದಿಂದ ಇದಕ್ಕೆ ಅನುಮತಿ ಸಿಕ್ಕಿದೆ. ಇದರ ಬೆನ್ನಲ್ಲೇ ಲಸಿಕೆ ರಫ್ತು ಕಾರ್ಯ ಆರಂಭಗೊಂಡಿದೆ.
ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಅನುಮೋದನೆ ನೀಡಿದೆ. ಇಷ್ಟು ದಿನ ಭಾರತದಲ್ಲಿ ಲಸಿಕೆ ವಿತರಣೆ ಮಾಡ್ತಿದ್ದ ಹೈದರಾಬಾದ್ ಮೂಲಕ ಫಾರ್ಮಾ ಕಂಪನಿ ಇದೀಗ ವಿದೇಶಗಳಿಗೆ ಲಸಿಕೆ ಕಳುಹಿಸಿ ಕೊಡುವ ಕಾರ್ಯ ಆರಂಭಿಸಿದೆ.
ಕಳೆದ ಕೆಲ ತಿಂಗಳ ಹಿಂದೆ ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿದ್ದರಿಂದ ವಿದೇಶಕ್ಕೆ ಮಾಡುವ ರಫ್ತಿನ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಇದೀಗ ಹೇರಳವಾಗಿ ಲಭ್ಯವಾಗುತ್ತಿರುವ ಕಾರಣ ಅದರ ಮೇಲಿನ ನಿಷೇಧ ತೆರವುಗೊಳಿಸಲಾಗಿದೆ.
ಈಗಾಗಲೇ ಭಾರತದಲ್ಲಿ 119 ಕೋಟಿಗೂ ಅಧಿಕ ಡೋಸ್ ನೀಡಲಾಗಿದೆ. ಕೆಲವೊಂದು ರಾಜ್ಯಗಳಲ್ಲಿ ಬಳಕೆಯಾಗದೇ ಹೆಚ್ಚಿನ ಪ್ರಮಾಣದ ಲಸಿಕೆ ಉಳಿದುಕೊಂಡಿರುವ ಕಾರಣ ವಿದೇಶಕ್ಕೆ ಭಾರತದ ಲಸಿಕೆಗಳು ರಫ್ತುಗೊಳ್ಳಲಿವೆ.
ಇದನ್ನೂ ಓದಿರಿ: ಕಟ್ಟಡ ನಿರ್ಮಾಣ ಕಾರ್ಯ, ಟ್ರಕ್ಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ ದೆಹಲಿ ಸರ್ಕಾರ
ಕಂಪನಿಗಳಿಗೆ ನವೆಂಬರ್ ತಿಂಗಳಿಂದ ರಫ್ತು ಆದೇಶ ಬಾಕಿ ಉಳಿದಿದೆ. ಇದೀಗ ಅವುಗಳ ಪೂರೈಕೆ ಮಾಡ್ತಿದ್ದು, ಬರುವ ದಿನಗಳಲ್ಲಿ ಹೆಚ್ಚಿನ ದೇಶಗಳಿಗೆ ಲಸಿಕೆ ರವಾನೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕೋವ್ಯಾಕ್ಸಿನ್ ಲಸಿಕೆ ಇದೀಗ ಇಂಡೋನೇಷ್ಯಾ, ನೇಪಾಳ, ಮಯನ್ಮಾರ್, ಬಾಂಗ್ಲಾದೇಶಕ್ಕೆ ರಫ್ತುಗೊಳ್ಳಲಿದೆ.