ನವದೆಹಲಿ: ಭಾರತದಲ್ಲಿ 134 ದಿನಗಳ ಬಳಿಕ ಸಾವಿರಕ್ಕೂ ಅಧಿಕ ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಒಂದೇ ದಿನದಲ್ಲಿ 1,805 ಹೊಸ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 10,300ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.47 ಕೋಟಿ (4,47,05,952) ಆಗಿದೆ. ದೈನಂದಿನ ಪಾಸಿಟಿವಿಟಿ ದರ 3.19 ಪ್ರತಿಶತ ಮತ್ತು ವಾರದ ಪಾಸಿಟಿವಿಟಿ ದರ 1.39 ಪ್ರತಿಶತದಲ್ಲಿ ದಾಖಲಾಗಿದೆ. ಚಂಡೀಗಢ, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಬ್ಬರು ಹಾಗೂ ಕೇರಳದಲ್ಲಿ ಇಬ್ಬರು ಸೇರಿ ಓಟ್ಟು 6 ಮಂದಿ ಸಾವನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,30,837ಕ್ಕೆ ಏರಿದೆ.
ರಾಷ್ಟ್ರೀಯ ಕೋವಿಡ್ ಚೇತರಿಕೆ ದರ 98.79 ಪ್ರತಿಶತದಷ್ಟು ದಾಖಲಾಗಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,64,815ಕ್ಕೆ ಏರಿದೆ. ಸಾವಿನ ಪ್ರಮಾಣವು ಶೇ. 1.19 ರಷ್ಟಿದೆ.
ವ್ಯಾಕ್ಸಿನೇಷನ್ ಅಂಕಿಅಂಶ: ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ 220.65 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಹವಾಮಾನ ಬದಲಾವಣೆ ಮತ್ತು H2N3 ಹರಡುವಿಕೆಯ ಮಧ್ಯೆ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿರಲು ಈ ನಿಯಮಗಳನ್ನು ಅನುಸರಿಸಿ..
1. ಲಸಿಕೆ ಪಡೆಯಿರಿ: ಕೋವಿಡ್ ವಿರುದ್ಧ ಹೋರಾಡಲು ಲಸಿಕೆ ಸಹಾಯ ಮಾಡುತ್ತದೆ. ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳು ವೈರಸ್‌ನಿಂದ ತೀವ್ರವಾದ ತೊಂದರೆ ಅನುಭವಿಸುವ ಸಾಧ್ಯತೆ ಕಡಿಮೆ. ನೀವು ಇನ್ನೂ ಬೂಸ್ಟರ್ ಡೋಸ್ ಲಸಿಕೆ ಪಡೆಯದಿದ್ದರೆ ತಕ್ಷಣ ಪಡೆಯಿರಿ.
2. ಮಾಸ್ಕ್ ಧರಿಸಿ: ಸಾಂಕ್ರಾಮಿಕ ರೋಗದ ಆರಂಭದಿಂದಲೂ ಫೇಸ್ ಮಾಸ್ಕ್ ಅಗತ್ಯ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾದಾಗ ಮಾಸ್ಕ್ ಧರಿಸುವುದನ್ನು ನಿಲ್ಲಿಸಿದರು. ಈಗ ಮತ್ತೆ ಮಾಸ್ಕ್ ಧರಿಸುವ ಸಮಯ ಬಂದಿದೆ. ಮಾಸ್ಕ್ ಧರಿಸುವುದರಿಂದ H2N3 ಇನ್ಫ್ಲುಯೆನ್ಸವನ್ನು ತಡೆಯಲು ಸಹ ನಿಮಗೆ ಸಹಾಯ ಮಾಡುತ್ತದೆ.
3. ಕೈ ತೊಳೆಯಿರಿ: ಸೋಂಕಿತ ಕಣಗಳು ನಿಮ್ಮ ಕೈಗಳಿಂದ ನಿಮ್ಮ ಕಣ್ಣು ಅಥವಾ ಮೂಗಿಗೆ ಸುಲಭವಾಗಿ ವರ್ಗಾವಣೆಯಾಗಬಹುದು. ನಿಯಮಿತವಾಗಿ ಸೋಪ್ ಮತ್ತು ನೀರಿನಿಂದ ಕೈಗಳನ್ನು ತೊಳೆಯುವುದು ಸೋಂಕಿನ ವರ್ಗಾವಣೆಯನ್ನು ತಡೆಯಲು ಸಹಾಯ ಮಾಡುತ್ತದೆ. ನೀವು ಸ್ಯಾನಿಟೈಸರ್ ಅನ್ನು ಸಹ ಬಳಸಬಹುದು.
4. ಗುಂಪು ಸೇರುವುದನ್ನು ತಪ್ಪಿಸಿ: ಕೂಟಗಳು ಮತ್ತು ಜನನಿಬಿಡ ಸ್ಥಳಗಳು ಸುಲಭವಾಗಿ ವೈರಸ್ ಹರಡಬಹುದು. ಆದ್ದರಿಂದ, ನಿಮ್ಮನ್ನು ಸುರಕ್ಷಿತವಾಗಿರಿಸಲು ಮದುವೆ, ಹಬ್ಬ, ಜಾತ್ರೆಗಳಂತಹ ಈ ಕೂಟಗಳನ್ನು ತಪ್ಪಿಸುವುದು ಉತ್ತಮ.
ಇದನ್ನೂ ಓದಿ: 149 ದಿನಗಳ ಬಳಿಕ ದೇಶದಲ್ಲಿ 1,890 ಕೋವಿಡ್ ಸೋಂಕಿತರು ಪತ್ತೆ; 7 ಮಂದಿ ಸಾವು