ಹೈದರಾಬಾದ್ (ತೆಲಂಗಾಣ) : ಕೋವಿಡ್ ಎರಡನೇ ಅಲೆ ದೇಶಾದ್ಯಂತ ಅಬ್ಬರಿಸುತ್ತಿದೆ. ಕೋವಿಡ್ ಪರಿಸ್ಥಿತಿಯ ಕುರಿತು ಮಾಹಿತಿ ತಿಳಿಸುವ ಉದ್ದೇಶದಿಂದ ಪ್ರತಿ 24 ಗಂಟೆಗಳಿಗೊಮ್ಮೆ ಹೊಸ ಪ್ರಕರಣ, ಸಾವು, ಸಕ್ರಿಯ ಪ್ರಕರಣಗಳು ಹೀಗೆ ಎಲ್ಲಾ ಮಾಹಿತಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 2,17,353 ಹೊಸ ಪ್ರಕರಣಗಳು ವರದಿಯಾಗಿದ್ದು, 1,185 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೆಲ ರಾಜ್ಯಗಳಲ್ಲಿ ಕೋವಿಡ್ ಅಟ್ಟಹಾಸ ಮೆರೆಯುತ್ತಿರುವುದರಿಂದ ಸೋಂಕಿನಿಂದ ಮರಣ ಹೊಂದಿದವರ ಅಂತ್ಯ ಸಂಸ್ಕಾರ ಸವಾಲಾಗಿದೆ.
ಈ ನಡುವೆ ಆಘಾತಕಾರಿ ವಿಷಯವೊಂದು ಬಯಲಾಗಿದ್ದು, 'ಈಟಿವಿ ಭಾರತ' ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಸರ್ಕಾರ ಒದಗಿಸಿದ ಮಾಹಿತಿ ಮತ್ತು ಸಂಭವಿಸಿದ ಕೋವಿಡ್ ಸಾವಿನ ಕುರಿತು ಸರ್ಕಾರ ಒದಗಿಸಿದ ಮಾಹಿತಿಯಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ.
ಮಧ್ಯಪ್ರದೇಶ :
ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ 10,166 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 53 ಜನರು ಮೃತಪಟ್ಟಿದ್ದಾರೆ. ಏಪ್ರಿಲ್ 12 ರ ಸಚಿವಾಲಯದ ಅಂಕಿ ಅಂಶಗಳು ಆ ದಿನ ಕೋವಿಡ್ ವೈರಸ್‌ನಿಂದ ರಾಜ್ಯಾದ್ಯಂತ 47 ಜನರು ಸಾವನ್ನಪ್ಪಿದ್ದಾರೆ. ಆದರೆ ಕೇವಲ ಎರಡು ಜಿಲ್ಲೆಗಳಲ್ಲಿ 95 ಶವಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಭೋಪಾಲ್‌ನಲ್ಲಿ 58 ಮತ್ತು ಚಿಂದ್ವಾರದಲ್ಲಿ 37. 'ಈಟಿವಿ ಭಾರತ' ಭೇಟಿ ನೀಡದ ಇನ್ನೂ 50 ಜಿಲ್ಲೆಗಳಿವೆ. ಇದು ರಾಜ್ಯ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಮೇಲೆ ಗಂಭೀರ ಅನುಮಾನವನ್ನು ಹುಟ್ಟುಹಾಕುತ್ತಿದೆ.
ದೆಹಲಿ :
ಕೊರೊನಾ ಸೋಂಕು ರಾಷ್ಟ್ರ ರಾಜಧಾನಿಯಲ್ಲೂ ಹೆಚ್ಚಿನ ಹಾನಿ ಮಾಡಿದೆ. ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 16,699 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 112 ಜನರು ಮೃತಪಟ್ಟಿದ್ದಾರೆ. ಒಟ್ಟು 54,309 ಸಕ್ರಿಯ ಪ್ರಕರಣಗಳಿವೆ. ಏಪ್ರಿಲ್ 12 ರಂದು 72 ಜನರು ಮೃತಪಟ್ಟಿದ್ದರು ಎಂದು ಸರ್ಕಾರದ ಅಂಕಿ-ಅಂಶಗಳು ತೋರಿಸುತ್ತವೆ. ಆದರೆ, ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 43 ಮತ್ತು ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 40 ಸೇರಿ ಒಟ್ಟು 83 ಶವಗಳನ್ನು ಅಂದು ಅಂತ್ಯಕ್ರಿಯೆ ಮಾಡಲಾಗಿದೆ.
ಚತ್ತೀಸ್ ಗಢ :
ಚತ್ತೀಸ್ಗಢದಲ್ಲಿ ಕಳೆದ 24 ಗಂಟೆಗಳಲ್ಲಿ 15,256 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಒಟ್ಟು 105 ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿ ಮತ್ತು ಮಧ್ಯಪ್ರದೇಶದಂತೆಯೇ, ಚತ್ತೀಸ್ ಗಢ ಸರ್ಕಾರದ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟು ಹಾಕುತ್ತದೆ.
ಒಟ್ಟಿನಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಕೆಲ ರಾಜ್ಯಗಳಲ್ಲಿ ಮರಣ ಮೃದಂಗ ಬಾರಿಸುತ್ತಿರುವಾಗ, ಕೋವಿಡ್ ನಿರ್ವಹಣೆಯಲ್ಲಿ ಆಯಾ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂಬ ವರದಿಗಳಿಂದ ಮುಜುಗರ ತಪ್ಪಿಸುವ ಸಲುವಾಗಿ ಸರ್ಕಾರ ಮೃತಪಟ್ಟವರ ವಾಸ್ತವ ಸಂಖ್ಯೆಯನ್ನು ಮರೆಮಾಚುತ್ತಿವೆಯಾ ಎಂಬ ಅನುಮಾನಗಳು ಮೂಡುತ್ತಿವೆ.