ನವದೆಹಲಿ: ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಭಾರತವೇ ಕೋವಿಡ್ ಸೋಂಕು ನಿರ್ವಹಣೆಯಲ್ಲಿ ಉತ್ತಮವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋವಿಡ್ ವಿಚಾರಕ್ಕೆ ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, ಪಂಜಾಬ್, ರಾಜಸ್ಥಾನ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದ ಆರೋಗ್ಯ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಕೊರೊನಾ ವಿರುದ್ಧ ರಾಷ್ಟ್ರವೇ ಒಟ್ಟಾಗಿ ಕೆಲಸ ಮಾಡಿದೆ. 10 ತಿಂಗಳಲ್ಲಿ ನಾವು ಹಲವಾರು ಹಂತಗಳನ್ನು ಕಂಡಿದ್ದೇವೆ. ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ಅನೇಕ ಬೆಳವಣಿಗೆಗಳು ರಾಷ್ಟ್ರದಲ್ಲಿ ಸಂಭವಿಸಿವೆ ಎಂದು ಡಾ.ಹರ್ಷವರ್ಧನ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಲಾಕ್ಡೌನ್ ಜಾರಿಗೊಳಿಸುವ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಂಡಿತು. ನಂತರ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆಯನ್ನು ಜಾರಿಗೆ ತರಲಾಯಿತು. ಈ ರೀತಿಯ ಕೋವಿಡ್ ನಿರ್ವಹಣೆ ಅಭಿವೃದ್ಧಿ ಹೊಂದಿದ ಇತರ ಎಲ್ಲಾ ದೇಶಗಳ ಕೋವಿಡ್ ನಿರ್ವಹಣೆಗಿಂತ ಉತ್ತಮವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ದೇಶದಲ್ಲಿ ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಶೇಕಡಾ 92.56ಕ್ಕೆ ತಲುಪಿದೆ ಎಂದ ಅವರು ಕೆಲವು ತಿಂಗಳುಗಳ ಹಿಂದೆ ಭಾರತದಲ್ಲಿ ಪ್ರತಿದಿನ ಸುಮಾರು 1 ಲಕ್ಷ ಮಂದಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದರು. ಈ ಹೊಸದಾಗಿ ಕೊರೊನಾ ಸೋಂಕು ಹೊಂದುವವರ ಪ್ರಮಾಣ ಕೂಡಾ ಗಣನೀಯವಾಗಿ ಇಳಿದಿದೆ ಎಂದು ಮಾಹಿತಿ ನೀಡಿದರು.
ಕೊರೊನಾ ಲಸಿಕೆಯ ಬಗ್ಗೆ ಮಾತನಾಡಿದ ಅವರು 2021ರ ವೇಳೆಗೆ ಲಸಿಕೆ ತಯಾರಾಗುವ ನಿರೀಕ್ಷೆಯಿದೆ. 20ರಿಂದ 30 ಕೋಟಿ ಮಂದಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಬೇಕಾಗಿದೆ. ಲಸಿಕಾ ಕೇಂದ್ರಗಳನ್ನು ಅನುಷ್ಠಾನಕ್ಕೆ ತರಬೇಕಿದೆ ಎಂದು ಈ ವೇಳೆ ಸ್ಪಷ್ಟನೆ ನೀಡಿದರು