ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಡೆಸುತ್ತಿರುವ ಕೋವಿಡ್ ಪರಿಹಾರ ನಿಧಿ ಸಂಗ್ರಹ ಅಭಿಯಾನದಲ್ಲಿ 11,39,11,820 ರೂ. ಸಂಗ್ರಹವಾಗಿದೆ.
ವಿರುಷ್ಕಾ ದಂಪತಿ ಮೇ 7 ರಂದು ₹ 2 ಕೋಟಿ ದೇಣಿಗೆ ನೀಡಿ ಅಭಿಯಾನ ಆರಂಭಿಸಿದ್ದರು. ಇಲ್ಲಿ ಸಂಗ್ರಹವಾದ ಮೊತ್ತವನ್ನು ಆ್ಯಕ್ಟ್ ಗ್ರ್ಯಾಂಟ್ಸ್ ಸಂಸ್ಥೆಗೆ ನೀಡಲಾಗುತ್ತದೆ. ಈ ಸಂಸ್ಥೆಯು ಆಮ್ಲಜನಕ, ವೈದ್ಯರ ಸೇವೆ, ಲಸಿಕೆ ಕುರಿತು ಜಾಗೃತಿ ಹಾಗೂ ಟೆಲಿ ಮೆಡಿಸಿನ್ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.
ಒಂದು ವಾರದ ಅವಧಿಗೆ ನಡೆಯುತ್ತಿರುವ ಅಭಿಯಾನಕ್ಕೆ ಇನ್ನೂ ಎರಡು ದಿನ ಬಾಕಿ ಇದೆ. ಒಟ್ಟು ₹ 7 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ಆ ಮೊತ್ತವನ್ನು ದಾಟಿ ಅಭಿಯಾನ ಮುಂದುವರಿದಿದೆ.
ಇದನ್ನೂ ಓದಿ:ಗುಜರಾತ್ ಮತ್ತು ಕೇರಳ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸಿದ ಇಸ್ರೋ
ಈ ಬಗ್ಗೆ ಪ್ರತಿಕ್ರಿಯಿಸಿರುವ ಅನುಷ್ಕಾ ನಿಧಿ ಸಂಗ್ರಹ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ನೀವೆಲ್ಲರೂ ತೋರಿಸಿದ ಒಗ್ಗಟ್ಟಿನ ಮನೋಭಾವದಿಂದ ನಾವು ನಿರೀಕ್ಷೆಗೂ ಮೀರಿ ಹೆಚ್ಚಿನ ಹಣ ಸಂಗ್ರಹಿಸಿದ್ದೇವೆ. ಇದರಿಂದಾಗಿ ಅನೇಕ ಜನರ ಜೀವ ಉಳಿಸಲು ಸಹಾಯವಾಗುತ್ತದೆ. ಇದನ್ನು ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ನಿಮ್ಮ ಅಗಾಧ ಬೆಂಬಲಕ್ಕೆ ಧನ್ಯವಾದಗಳು, ಜೈ ಹಿಂದ್ ಎಂದಿದ್ದಾರೆ.