ಬೆಂಗಳೂರು: ನಿಯಂತ್ರಿತ ಕ್ಲಿನಿಕಲ್ ಟ್ರಯಲ್ಗಳ ವಿಷಯಗಳಲ್ಲಿ ಕೋವಿಡ್-19 ನ ಕೋವ್ಯಾಕ್ಸಿನ್ ಬೂಸ್ಟರ್ ಲಸಿಕೆಯು ಸುರಕ್ಷಿತ, ಉತ್ತಮ ಸಹಿಷ್ಣುತೆ ಮತ್ತು ರೋಗನಿರೋಧಕ ಗುಣಗಳನ್ನು ಒಳಗೊಂಡಿರುವುದು ಸಾಬೀತಾಗಿದೆ ಎಂದು ಕೋವ್ಯಾಕ್ಸಿನ್ ತಯಾರಕ ಕಂಪನಿ ಭಾರತ ಬಯೋಟೆಕ್ ಹೇಳಿದೆ. ಔಷಧ ವಿಜ್ಞಾನ ಕ್ಷೇತ್ರದ ಪ್ರತಿಷ್ಠಿತ ಜರ್ನಲ್ ಆಗಿರುವ ನೇಚರ್ ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ ಈ ಕುರಿತಾದ ಸಂಶೋಧನಾ ವರದಿಯನ್ನು ಅಂಗೀಕರಿಸಿದೆ ಹಾಗೂ ವರದಿಯನ್ನು ಪ್ರಕಟಿಸಿದೆ ಎಂದು ಕಂಪನಿ ತಿಳಿಸಿದೆ.
1:1 ಅನುಪಾತದಲ್ಲಿ ರ್ಯಾಂಡಮೈಜ್ ಮಾಡಲಾದ 184 ವಿಷಯಗಳ ಮೇಲೆ ಸಂಶೋಧನೆ ನಡೆಸಲಾಗಿತ್ತು. ಪ್ರಾಥಮಿಕ ಎರಡು ಡೋಸ್ಗಳನ್ನು ಪಡೆದ 6 ತಿಂಗಳ ನಂತರ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಅಥವಾ ಪ್ಲಾಸೆಬೊ ಪಡೆದವರ ಮೇಲೆ ಈ ಸಂಶೋಧನೆಗಳನ್ನು ನಡೆಸಲಾಗಿದೆ ಎಂದು ಕಂಪನಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುರಕ್ಷತೆ, ವಿವಿಧ ವೇರಿಯಂಟ್ಗಳು ಆ್ಯಂಟಿಬಾಡಿಗಳನ್ನು ತಟಸ್ಥಗೊಳಿಸುವುದನ್ನು ತಡೆಯುವುದು, ಸ್ಪೈಕ್ ಪ್ರೋಟೀನ್‌ಗಳಿಗೆ ಆ್ಯಂಟಿಬಾಡೀಸ್ ಸುತ್ತಿಕೊಳ್ಳುವುದು, ಆರ್‌ಬಿಡಿ, ಎನ್ ಪ್ರೋಟೀನ್ ಮತ್ತು ಸೆಲ್ ಮೆಡಿಟೇಟೆಡ್ ಪ್ರತಿಕ್ರಿಯೆಯನ್ನು ತಿಳಿಯಲು ಮೆಮೊರಿ ಟಿ ಮತ್ತು ಬಿ ಸೆಲ್ ಪ್ರತಿಕ್ರಿಯೆಗಳ ವಿಷಯಗಳ ಬಗ್ಗೆ ಪರಿಶೀಲಿಸಲಾಯಿತು ಎಂದು ಅದು ತಿಳಿಸಿದೆ. ಸ್ಪೈಕ್, ಆರ್‌ಬಿಡಿ ಮತ್ತು ಎನ್ ಪ್ರೊಟೀನ್‌ಗಳ ವಿರುದ್ಧ ಪ್ರತಿಕಾಯಗಳೊಂದಿಗೆ ಕೋವ್ಯಾಕ್ಸಿನ್ ಈಗ ಮಲ್ಟಿ-ಎಪಿಟೋಪ್ ಲಸಿಕೆ ಎಂಬುದನ್ನು ಕಂಪನಿಯು ಈಗ ಸಾಬೀತು ಪಡಿಸಿದೆ ಎಂದು ಭಾರತ್ ಬಯೋಟೆಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ಹೇಳಿದ್ದಾರೆ.
ಕೋವ್ಯಾಕ್ಸಿನ್ ಅನ್ನು ವಿಶಿಷ್ಟವಾಗಿ ತಯಾರಿಸಲಾಗಿದ್ದು, ಒಂದೇ ರೀತಿಯ ಡೋಸೇಜ್ ಅನ್ನು ವಯಸ್ಕರು ಮತ್ತು ಮಕ್ಕಳಿಗೆ ಪ್ರಾಥಮಿಕ ಮತ್ತು ಬೂಸ್ಟರ್ ಡೋಸ್‌ಗಳಾಗಿ ನೀಡಬಹುದು. ಇದು ವಾಸ್ತವದಲ್ಲಿ ಸಾರ್ವತ್ರಿಕ ಲಸಿಕೆಯಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.ಭಾರತ್ ಬಯೋಟೆಕ್ 50 ಮಿಲಿಯನ್ ಡೋಸ್ ಕೋವ್ಯಾಕ್ಸಿನ್ ಲಸಿಕೆ ಸಂಗ್ರಹ ಹೊಂದಿದ್ದು, ಅಗತ್ಯವಿರುವಾಗ ವಿತರಿಸಲು ಸಿದ್ಧವಾಗಿದೆ.