ನವದೆಹಲಿ: ಭಾರತ್ ಬಯೋಟೆಕ್ ಸಂಸ್ಥೆ ತಯಾರಿಕೆಯ ಕೋವಾಕ್ಸಿನ್ ಲಸಿಕೆ ಸೋಂಕಿನ ವಿರುದ್ಧದ ಹೋರಾಟದಲ್ಲಿ ಶೇ.77.8ರಷ್ಟು ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಯಲ್ಲಿ ಖಾತರಿಯಾಗಿದೆ ಎಂದು ತಿಳಿಸಿದೆ.
ಇದಲ್ಲದೆ ಭಾರತದಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ರೂಪಾಂತರಿ ಡೆಲ್ಟಾ ವೈರಸ್ ವಿರುದ್ಧ ಶೇ. 65.2ರಷ್ಟು ಪರಿಣಾಮಕಾರಿಯಾಗಿದ್ದು, ತೀವ್ರ ಕೋವಿಡ್ ರೋಗಲಕ್ಷಣದ ವಿರುದ್ಧ ಶೇ.93.4ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ ಎಂದು ಕಂಪನಿ ವಿವರಿಸಿದೆ.
ಕೋವಾಕ್ಸಿನ್ ಸಾರ್ಸ್-ಸಿಒವಿ2 (SARS-CoV2) ವಿರುದ್ಧದ ಹೋರಾಟಕ್ಕಾಗಿ ಪುಣೆಯ ಐಸಿಎಂಆರ್ ಮತ್ತು ಎನ್ಐವಿ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ.
3 ನೇ ಹಂತದ ಕ್ಲಿನಿಕಲ್ ಪ್ರಯೋಗವು 2ನೇ ಡೋಸ್ ಪಡೆದ ಕನಿಷ್ಠ 2 ವಾರಗಳ ನಂತರ ವರದಿಯಾಗಿರುವ 130 ಬಗೆಯ ಕೋವಿಡ್ ರೋಗಲಕ್ಷಣದ ಹೊಂದಿರುವವರ ಮೇಲೆ ನಡೆಸಲಾಗಿದೆ. ಭಾರತದ 25 ಸ್ಥಳಗಳಲ್ಲಿ 3ನೇ ಹಂತದ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಓದಿ: ದೇಶದಲ್ಲಿ ಹೊಸ 44,111 ಕೋವಿಡ್ ಪ್ರಕರಣಗಳು ಪತ್ತೆ: 738 ಮಂದಿ ಸಾವು