ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನ ಇತ್ತೀಚಿನ ಅಧ್ಯಯನವು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಕೋವಿಡ್ ರೂಪಾಂತರಿ ಡೆಲ್ಟಾ ಪ್ಲಸ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದಲ್ಲಿ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಕೋವಿಡ್ ರೋಗ ಲಕ್ಷಣಗಳಿರುವ ಸೋಂಕಿತರಿಗೆ ಶೇ.77.8 ಮತ್ತು ಡೆಲ್ಟಾ ರೂಪಾಂತರಿ ವಿರುದ್ಧ ಶೇ.65.2 ರಷ್ಟು ಕೋವ್ಯಾಕ್ಸಿನ್ ಪರಿಣಾಮಕಾರಿ ಎಂದು ಈ ಹಿಂದೆ ಭಾರತ್ ಬಯೋಟೆಕ್ ಹೇಳಿತ್ತು.
ಕೋವ್ಯಾಕ್ಸಿನ್ ಪರಿಣಾಮಕತ್ವದ ವಿಶ್ಲೇಷಣೆಯಲ್ಲಿ ತೀವ್ರ ತರದ ರೋಗ ಲಕ್ಷಣಗಳಿರುವ ರೋಗಿಗಳಿಗೆ ಇದು ಶೇ. 93.4 ರಷ್ಟು ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ. ಇನ್ನು ಲಸಿಕೆಯ ವ್ಯತಿರಿಕ್ತ ಪರಿಣಾಮಗಳನ್ನು ವಿಶ್ಲೇಷಣೆ ಮಾಡಿದರೆ ಶೇ.12 ರಷ್ಟು ಸಾಮಾನ್ಯ ಪ್ರತಿಕೂಲ ಪರಿಣಾಮ ಬೀರಲಿದೆ. ಶೇ. 0.5 ರಷ್ಟು ಪ್ರತಿಕೂಲ ಪರಿಣಾಮ ಬೀರುವುದು ಖಚಿತ ಎಂದು ತಿಳಿದು ಬಂದಿದೆ.
ಇನ್ನು ರೋಗ ಲಕ್ಷಣಗಳಿಲ್ಲದ ರೋಗಿಗಳಿಗೆ ಕೋವ್ಯಾಕ್ಸಿನ್ ಶೇ. 63.6 ರಷ್ಟು ಪರಿಣಾಮ ಬೀರುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿ (Emergency Use Listing -EUL) ಗೆ ಸೇರಿಸಲು ಅಗತ್ಯವಿರುವ ದಾಖಲೆಗಳನ್ನು ಜುಲೈ 9 ರಂದು ಭಾರತ್ ಬಯೋಟೆಕ್ ಸಲ್ಲಿಸಿದೆ. ಏಜೆನ್ಸಿಯ ಪರಿಶೀಲನಾ ಪ್ರಕ್ರಿಯೆಯು ಆರಂಭವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ರಾಜ್ಯಸಭೆಗೆ ತಿಳಿಸಿದರು.