ಹೈದರಾಬಾದ್: ಬ್ರಿಟನ್ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೊನಾ ವೈರಸ್ ಅನ್ನು ಕೋವ್ಯಾಕ್ಸಿನ್ ಲಸಿಕೆಯಿಂದ ಗುಣಪಡಿಸಬಹುದು ಎಂದು ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆ ಭಾರತ್ ಬಯೋಟೆಕ್ ಹೇಳಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಈ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಸದ್ಯ 3ನೇ ಹಂತದ ಲಸಿಕೆ ಪ್ರಯೋಗ ಮಾಡಲಾಗಿದೆ. ಈ ವೇಳೆ 20ಸಾವಿರ ಸ್ವಯಂ ಸೇವಕರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಬಳಸಲು ತುರ್ತು ಪರವಾನಗಿ ಅನುಮೋದನೆ ಕೋರಿ ಸಂಸ್ಥೆ ಔಷಧ ನಿಯಂತ್ರಕ ಅಧಿಕಾರಿಗಳನ್ನು ಸಂಪರ್ಕಿಸಿದೆ.
ಕೊರೊನಾ ವೈರಸ್ ಸಾಕಷ್ಟು ರೂಪಾಂತರ ಹೊಂದುವ ನಿರೀಕ್ಷೆಯಿದ್ದು, ನಾವು ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಅದರ ವಿರುದ್ಧವೂ ಹೋರಾಡಲಿದೆ. ಈ ಬಗ್ಗೆ ನಮಗೆ ಖಾತ್ರಿಯಿದೆ ಎಂದು ಸಂಸ್ಥೆ ಹೇಳಿದೆ. ಯುಕೆಯಿಂದ ಭಾರತಕ್ಕೆ ಮರಳಿದ ಆರು ಜನರಿಗೆ ರೂಪಾಂತರಿತ ವೈರಸ್ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ಡೆನ್ಮಾರ್ಕ್, ನೆದರ್ಲೆಂಡ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರದಲ್ಲಿ ರೂಪಾಂತರಿ ಕೊರೊನಾ ವೈರಸ್ ಕುರಿತು ಈಗಾಗಲೇ ವರದಿಯಾಗಿದೆ.