ವಾರಾಣಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ವಿವಾದಕ್ಕೆ ಶುಕ್ರವಾರ ವಾರಾಣಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವಜು ಸ್ಥಳ ಹೊರತುಪಡಿಸಿ ಶೃಂಗಾರ ಗೌರಿ ಆವರಣದ ಸಂಪೂರ್ಣ ಪ್ರದೇಶದ ವೈಜ್ಞಾನಿಕ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿದೆ. ಭಾರತೀಯ ಪುರಾತತ್ವ ಇಲಾಖೆಯು ತನ್ನ ವರದಿಯನ್ನು ಆಗಸ್ಟ್ 4ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಕೋರ್ಟ್ ಸೂಚನೆ ನೀಡಿದೆ.
ಜ್ಞಾನವಾಪಿ ಮಸೀದಿ ಪ್ರಕರಣವು ಸಾಕಷ್ಟು ಚರ್ಚೆಯ ವಿಷಯವಾಗಿದೆ. ಹಿಂದೂ ದೇವಾಲಯದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂದು ಕೋರಿ ಹಿಂದೂ ಭಕ್ತರ ಗುಂಪಿನ ಅರ್ಜಿಯನ್ನು ನ್ಯಾಯಾಲಯು ಪುರಸ್ಕರಿಸಿದೆ. ಆದರೆ, ಹಿಂದೂ ಅರ್ಜಿದಾರರು ಶಿವಲಿಂಗ ಎಂದು ಹೇಳುವ ರಚನೆಯು ಅಥವಾ ವಜುಖಾನಾ ಸಮೀಕ್ಷೆಯ ಭಾಗವಾಗಿರುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
ಈ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಡೆಸಲಿದೆ. ಈ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಆಗಸ್ಟ್ 4ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಎಸ್‌ಐಗೆ ಸೂಚಿಸಲಾಗಿದೆ. ಜೊತೆಗೆ ಸಮೀಕ್ಷೆಯ ಪ್ರಕ್ರಿಯೆ ಸಂದರ್ಭದಲ್ಲಿ ಮಸೀದಿಯೊಳಗೆ ಮುಸ್ಲಿಂ ಆರಾಧಕರು ಮಾಡುವ ನಮಾಜ್ ಹಾಗೂ ಪ್ರಾರ್ಥನೆಗಳಿಗೆ ಅಡ್ಡಿಯಾಗದಂತೆಯೂ ನ್ಯಾಯಾಲಯ ನಿರ್ದೇಶನ ನೀಡಿದೆ. ಅಲ್ಲದೇ, ಮಸೀದಿಯ ಆಸ್ತಿಗೆ ಯಾವುದೇ ಹಾನಿ ಮಾಡದಂತೆ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ಸಮೀಕ್ಷೆಯ ಸಮಯದ ಬಗ್ಗೆಯೂ ನ್ಯಾಯಾಲಯವು ತಿಳಿಸಿದ್ದು, ಬೆಳಗ್ಗೆ 8ರಿಂದ 12 ಗಂಟೆಯೊಳಗೆ ಪುರಾತತ್ವ ಇಲಾಖೆಯು ಸಮೀಕ್ಷೆ ನಡೆಸಲು ನಿರ್ದೇಶಿಸಿದೆ. ಜ್ಞಾನವಾಪಿ ಮಸೀದಿಯ ಜಾಗದಲ್ಲಿ ಹಿಂದೆ ಇದ್ದ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂದು ಹಿಂದೂ ಭಕ್ತರ ಪರ ವಕೀಲ ವಿಷ್ಣು ಶಂಕರ್ ಜೈನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಈ ಸ್ಥಳವು ಕೋಟ್ಯಂತರ ಜನರ ಭಾವನೆಗಳಿಗೆ ಸಂಬಂಧಿಸಿದೆ. ದೇವಾಲಯದ ಅವಶೇಷಗಳು ಸಂಕೀರ್ಣದ ಪಶ್ಚಿಮ ಗೋಡೆಯ ಮೇಲೆ ಗೋಚರಿಸುತ್ತವೆ ಇಡೀ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯಿಂದ ಮಾತ್ರ ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ವಿವಾದವನ್ನು ಪರಿಹರಿಸಬಹುದು ಎಂದು ಜೈನ್ ನ್ಯಾಯಾಲಯದಲ್ಲಿ ವಾದಿಸಿದರು.
ಮತ್ತೊಂದೆಡೆ, ಎಎಸ್‌ಐ ಸಮೀಕ್ಷೆಯಿಂದ ಸಂಕೀರ್ಣಕ್ಕೆ ಹಾನಿಯಾಗಬಹುದು ಎಂದು ಮುಸ್ಲಿಮರ ಕಡೆಯವರು ಈ ಅರ್ಜಿ ಮನವಿಯನ್ನು ವಿರೋಧಿಸಿದ್ದರು. ಜುಲೈ 14ರಂದು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ವಾದವನ್ನು ಆಲಿಸಿದ್ದ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಇದನ್ನೂ ಓದಿ: ವಾರಾಣಸಿಯ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿ ವಿವಾದ ವರ್ಗಾವಣೆ: ಸುಪ್ರೀಂ ಆದೇಶ