ವಾರಾಣಸಿ (ಉತ್ತರ ಪ್ರದೇಶ): ವಾರಣಾಸಿಯ ಕಾಶಿ ವಿಶ್ವನಾಥ್ ಮತ್ತು ಜ್ಞಾನವಾಪಿ ಮಸೀದಿ ಆವರಣದಲ್ಲಿ ನ್ಯಾಯಾಲಯದಿಂದ ನೇಮಕಗೊಂಡ ವಕೀಲರ ತಂಡವು ವೀಡಿಯೋಗ್ರಾಫಿ ಸರ್ವೆ ಮತ್ತು ಪರಿಶೀಲನೆ ಆರಂಭಿಸಲಿದೆ. ಇದರಿಂದ ಶುಕ್ರವಾರ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇಲ್ಲಿನ ಶೃಂಗಾರ ಗೌರಿ ದೇವಸ್ಥಾನದ ವಿಷಯವಾಗಿ ವಾರಾಣಸಿಯ ಸಿವಿಲ್ ನ್ಯಾಯಾಲಯವು ಏ.26ರಂದು ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪರಿಶೀಲನೆ ನಡೆಸಲು ಮತ್ತು ಚಿತ್ರೀಕರಣಕ್ಕೆ ಆದೇಶಿಸಿದೆ. ಆದರೆ, ಜ್ಞಾನವಾಪಿ ಮಸೀದಿಯ ಆಡಳಿತ ಮಂಡಳಿಯು ನ್ಯಾಯಾಲಯದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ, ಮಸೀದಿಗೊಳಗೆ ಮುಸ್ಲಿಮೇತರರು ಪ್ರವೇಶಿಸದಂತೆ ಮತ್ತು ಚಿತ್ರೀಕರಣಕ್ಕೆ ನಿಷೇಧಿಸಲಾಗಿದೆ.
ಇತ್ತ, ನ್ಯಾಯಾಲಯದ ಆದೇಶದ ಪಾಲನೆ ನಿಟ್ಟಿನಲ್ಲಿ ವಕೀಲರ ತಂಡವು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಬರಬೇಕಿತ್ತು. ಆದರೆ, ಸಂಜೆಯಾದರೂ ಈ ತಂಡ ಬಂದಿಲ್ಲ ಎಂದು ಹೇಳಲಾಗಿದೆ. ಜೊತೆಗೆ ಈ ಸಮೀಕ್ಷೆ ಪೂರ್ಣವಾಗಲು 3-4 ದಿನಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಎರಡು ಮಹಡಿ: ಮಸೀದಿಯ ಎರಡು ಮಾಳಿಗೆಗಳನ್ನು ಸರ್ವೆ ಮಾಡಲು ನ್ಯಾಯಾಲಯವು ಆದೇಶಿಸಿದೆ. ಒಂದು ನೆಲ ಮಾಳಿಗೆಯ ಕೀಲಿಯು ಜಿಲ್ಲಾಡಳಿತದ ಬಳಿ ಇದ್ದು, ಮತ್ತೊಂದು ನೆಲಮಾಳಿಗೆಯ ಕೀಲಿಯನ್ನು ಮಸೀದಿಯ ಆಡಳಿತ ಮಂಡಳಿಯು ಬಳಿ ಇದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಪೊಲೀಸ್ ಬಂದೋಬಸ್ತ್ ನಡುವೆಯೂ ಶುಕ್ರವಾರ ಮಹಿಳೆಯೊಬ್ಬರು ಮಸೀದಿ ಹೊರಭಾಗದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಚುನಾವಣೆ ಸುಳ್ಳು ಭರವಸೆಗಳ ಮರೆಮಾಚಲು ಸಿಎಎ ಮತ್ತೆ ಮುನ್ನೆಲೆಗೆ: ಅಮಿತ್ ಶಾ ವಿರುದ್ಧ ಸಿಪಿಐಎಂ ಕಿಡಿ