ರೇವಾ( ಮಧ್ಯಪ್ರದೇಶ): ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಸಾಗುತ್ತಲೇ ಇದೆ. ರೈತರ ಬೆಂಬಲಕ್ಕೆ ಸಾಕಷ್ಟು ಜನ ನಿಂತಿದ್ದಾರೆ. ಇಲ್ಲೊಂದು ಜೋಡಿ ರೈತರ ಪ್ರತಿಭಟನೆ ನಡೆಯುವ ಸ್ಥಳದಲ್ಲೇ ಮದುವೆ ಮಾಡಿಕೊಂಡು ಗಮನ ಸೆಳೆದಿದೆ.
ಮಾರ್ಚ್ 18 ರಂದು ರೈತ ನಾಯಕ ರಾಮ್‌ಜಿತ್ ಸಿಂಗ್ ತನ್ನ ಮಗ ಸಚಿನ್ ಸಿಂಗ್ ಮದುವೆಯನ್ನು ಆಸ್ಮಾ ಸಿಂಗ್ ಜೊತೆ ಪ್ರತಿಭಟನಾ ಸ್ಥಳದಲ್ಲೇ ನಡೆಸಿದರು. ಇನ್ನು ಮದುವೆ ವೇಳೆ ಅಗ್ನಿಕುಂಡ ಸ್ಥಳದಲ್ಲಿ ಸಂವಿಧಾನ ರಚಿತ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಸಾವಿತ್ರಿ ಬಾ ಪುಲೆ ಫೋಟೋಗಳನ್ನಿಟ್ಟು ಅದರ ಸುತ್ತ ಏಳು ಹೆಜ್ಜೆ ಹಾಕು ಮೂಲಕ ಸಚಿನ್ ಸಿಂಗ್ ಮತ್ತು ಆಸ್ಮಾ ಸಿಂಗ್ ಸಾಂಸರಿಕ ಜೀವನಕ್ಕೆ ಕಾಲಿಟ್ಟರು.
ಜನವರಿ 3 ರಿಂದ ರೈತರ ಪ್ರತಿಭಟನೆ ನಡೆಯುತ್ತಿದೆ. ರೈತರ ಹಿತ ಕಾಯದ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಅನ್ನಾದಾತರು ಪ್ರತಿಭಟನೆ ಮೂಲಕ ಒತ್ತಾಯಿಸುತ್ತಿದ್ದಾರೆ. ಆದ್ರೆ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ರೈತರು ಪ್ರತಿಯೊಂದು ಕಾರ್ಯವನ್ನು ಈ ಸ್ಥಳದಲ್ಲಿ ಆಯೋಜಿಸುತ್ತಾರೆ. ಜನ್ಮದಿನಗಳನ್ನು ಸಹ ಇಲ್ಲಿ ಆಚರಿಸಲಾಗುತ್ತದೆ. ಈ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಾವು ಬಿಡುವುದಿಲ್ಲ ಎಂದು ವರ ಸಚಿನ್ ಸಿಂಗ್ ಹೇಳಿದರು.
ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಾವು ಈ ಸ್ಥಳವನ್ನು ತೊರೆಯುವುದಿಲ್ಲ. ಈ ಮದುವೆ ಮೂಲಕ ಸರ್ಕಾರಕ್ಕೆ ಬಲವಾದ ಸಂದೇಶವನ್ನು ನೀಡಲು ಬಯಸಿದ್ದೇವೆ ಎಂದು ಮಧ್ಯಪ್ರದೇಶದ ಕಿಸಾನ್ ಸಭೆಯೊಂದಿಗೆ ಸಂಬಂಧ ಹೊಂದಿರುವ ಸಚಿನ್ ತಂದೆ ರಾಮ್‌ಜಿತ್ ಸಿಂಗ್ ಹೇಳಿದ್ದಾರೆ.