ಇಡುಕ್ಕಿ : ನೂರೊಂದು ಆಸೆಗಳನ್ನು ಹೊತ್ತು ಆ ದಂಪತಿ ತನ್ನ ಮುದ್ದಾದ ಮಗಳೊಂದಿಗೆ ಗೃಹ ಪ್ರವೇಶ ಮಾಡಿದ್ದರು. ಆದ್ರೆ, ಮನೆಯಲ್ಲಿ ವಾಸವಿದ್ದ ಎರಡು ದಿನಗಳ ಬಳಿಕ ಬೆಂಕಿ ಅವಘಡ ಸಂಭವಿಸಿ ದಂಪತಿ ಸಾವನ್ನಪ್ಪಿದ್ದು, ಮಗಳು ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಈ ಮನಕಲುಕುವ ಘಟನೆ ಜಿಲ್ಲೆಯ ಪುಟ್ಟಡಿ ಎಂಬಲ್ಲಿ ನಡೆದಿದೆ.
ಮೃತರನ್ನು ರವೀಂದ್ರನ್ (50) ಮತ್ತು ಉಷಾ (45) ಎಂದು ಗುರುತಿಸಲಾಗಿದೆ. ಅವರ ಪುತ್ರಿ ಶ್ರೀಧನ್ಯ ಎಂಬುವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್ಥಿಕವಾಗಿ ದುರ್ಬಲಗೊಂಡ ವರ್ಗದವರಿಗೆ ಮನೆ ನಿರ್ಮಿಸಲು ಕೇರಳ ಸರ್ಕಾರ ಹಣ ನೀಡುತ್ತಿದೆ. ಆರ್ಥಿಕ ನೆರವು ನೀಡುವ ಲೈಫ್ ಯೋಜನೆಯಡಿ ಕೇರಳ ಸರ್ಕಾರ ನೀಡಿದ್ದ ಹಣದಲ್ಲಿ ರವೀಂದ್ರನ್ ಮತ್ತು ಉಷಾ ದಂಪತಿ ಮನೆ ನಿರ್ಮಿಸಿಕೊಂಡಿದ್ದರು. ಎರಡು ದಿನಗಳ ಹಿಂದೆಯಷ್ಟೇ ಇವರ ಕುಟುಂಬ ಹೊಸ ಮನೆಗೆ ತೆರಳಿದ್ದರು.
ಓದಿ: ಹುಟ್ಟುಹಬ್ಬಕ್ಕೆಂದು ಕರೆಸಿ ಬಾಲಕಿಗೆ ಬೆಂಕಿ ಹಚ್ಚಿದ ಯುವಕ: ಇಬ್ಬರೂ ಸಾವು
ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಶ್ರೀಧನ್ಯ ಮನೆಯಿಂದ ಹೊರ ಜಿಗಿದು ಕೂಗಿದಾಗ ನೆರೆಹೊರೆಯವರು ಸಹಾಯಕ್ಕೆ ದೌಡಾಯಿಸಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಮನೆಯ ಎಲ್ಲಾ ವಸ್ತುಗಳು ಜೊತೆ ಉಷಾ ಮತ್ತು ರವೀಂದ್ರನ್ ದಂಪತಿ ಬೆಂಕಿಗೆ ಆಹುತಿಯಾಗಿದ್ದಾರೆ.
ತೀವ್ರ ಸುಟ್ಟ ಗಾಯಗಳೊಂದಿಗೆ ಬಳಲುತ್ತಿದ್ದ ಶ್ರೀಧನ್ಯಾಳನ್ನು ಇಡುಕ್ಕಿಯ ಕಟ್ಟಪ್ಪನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.