ಲಖನೌ (ಉತ್ತರ ಪ್ರದೇಶ): ಭಾರತೀಯ ವಾಯುಸೇನೆಯಲ್ಲಿ ಫೈಟರ್ ಪೈಲಟ್ ಆಗಲು ಆಯ್ಕೆಯಾಗಿರುವ ಸಾನಿಯಾ ಮಿರ್ಜಾ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು. ಮಿರ್ಜಾಪುರದ ಟಿವಿ ಮೆಕ್ಯಾನಿಕ್ ವೃತ್ತಿಯಲ್ಲಿರುವ ವ್ಯಕ್ತಿಯ ಪುತ್ರಿ ಸಾನಿಯಾ ಮಿರ್ಜಾ, ದೇಶದ ಮೊದಲ ಮುಸ್ಲಿಂ ಮತ್ತು ರಾಜ್ಯದ ಮೊದಲ ಮಹಿಳಾ ಐಎಎಫ್ ಪೈಲಟ್ ಆಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ, 'ಸಾನಿಯಾ ಮಿರ್ಜಾ ಅಲ್ಪಸಂಖ್ಯಾತ ಸಮುದಾಯದ ಹೆಮ್ಮೆ. ಅವರ ಸಾಧನೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿನಂದಿಸಿದ್ದಾರೆ. ಅವರು ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸಿದ್ದಾರೆ' ಎಂದರು. ಸಾನಿಯಾರ ಪೋಷಕರನ್ನೂ ಸಿಎಂ ಅಭಿನಂದಿಸಿದ್ದು, ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಅವರು ಹೇಳಿದರು.
ಸಾನಿಯಾಗೆ ಬೇಕಾದ ಅಗತ್ಯ ಸಹಕಾರವನ್ನು ಸರ್ಕಾರದಿಂದ ನೀಡಲಾಗುತ್ತದೆ ಸಿಎಂ ಭರವಸೆ ಕೊಟ್ಟಿದ್ದಾರೆ. ಯುವ ಜನರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ಸದಾ ಸಿದ್ಧವಾಗಿದೆ. ರಾಜ್ಯದ ಬಿಜೆಪಿ ಸರ್ಕಾರ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಮಹತ್ವ ಕೊಟ್ಟಿದೆ ಎಂದಿದ್ದಾರೆ.
ಇದರ ಪರಿಣಾಮವಾಗಿಯೇ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಾನಿಯಾ ಮಿರ್ಜಾ ಅವರು ಉತ್ತರ ಪ್ರದೇಶದ ಮೊದಲ ಮಹಿಳಾ ಪೈಲಟ್ ಎಂಬುದನ್ನು ಸಾಧಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಅನ್ಸಾರಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್ ಈ ಸಾನಿಯಾ ಮಿರ್ಜಾ..