ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ ಇನ್ನೇನು ಕೆಲವೇ ಗಂಟೆಗಳಲ್ಲಿ ಹೊರಬರಲಿದೆ. 2 ಕೋಟಿ 32 ಲಕ್ಷಕ್ಕೂ ಹೆಚ್ಚಿನ ಮತದಾರ ಪ್ರಭುಗಳು ಇವಿಎಂಗಳಲ್ಲಿ ನೀಡಿರುವ ತೀರ್ಪು ಇಂದು ಪ್ರಕಟವಾಗಲಿದೆ. 2,290 ಅಭ್ಯರ್ಥಿಗಳು ತಮ್ಮ ಪ್ರಚಾರ ಮತ್ತು ವರ್ಚಸ್ಸಿನ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ನವೆಂಬರ್ 30ರಂದು ಚುನಾವಣೆ ನಡೆದಿದ್ದು, 119 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಭಾನುವಾರ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ಬೆಳಗ್ಗೆ ಎಂಟು ಗಂಟೆಗೆ ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ. ಅರ್ಧ ಗಂಟೆ ನಂತರ 8:30ಕ್ಕೆ ಇವಿಎಂಗಳಲ್ಲಿನ ಮತಗಳ ಎಣಿಕೆ ನಡೆಯಲಿದೆ. ಒಟ್ಟು 2417 ಸುತ್ತಿನ ಫಲಿತಾಂಶ ಪ್ರಕಟವಾಗಲಿದೆ. ಜುಬ್ಲಿ ಹಿಲ್ಸ್ ಕ್ಷೇತ್ರವು 26 ಸುತ್ತುಗಳಲ್ಲಿ ಅತಿ ಹೆಚ್ಚು ಮತ ಎಣಿಕೆ ಹೊಂದಿದ್ದು, ಭದ್ರಾಚಲಂನಲ್ಲಿ ಕೇವಲ 13 ಸುತ್ತುಗಳಲ್ಲಿ ಕಡಿಮೆ ಸಂಖ್ಯೆಯ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಗಾಗಿ 119 ಕ್ಷೇತ್ರಗಳಲ್ಲಿ 1798 ಟೇಬಲ್ ಗಳನ್ನು ಹಾಕಲಾಗಿದೆ. ಮೆಡ್ಚೆಲ್, ಕುತ್ಬುಲ್ಲಾಪುರ, ಎಲ್‌ಬಿ ನಗರ, ಮಹೇಶ್ವರಂ, ರಾಜೇಂದ್ರ ನಗರ ಮತ್ತು ಸೆರಿಲಿಂಗಂಪಲ್ಲಿ ಕ್ಷೇತ್ರಗಳಲ್ಲಿ ಎಣಿಕೆಗೆ ಗರಿಷ್ಠ 28 ಟೇಬಲ್‌ಗಳನ್ನು ಹಾಕಲಾಗಿದೆ.
ಎಣಿಕೆ ವಿಧಾನ ಹೇಗೆ?: ಮೊದಲು ಅಂಚೆ ಮತಗಳ ಮತ ಎಣಿಕೆ ಆರಂಭವಾಗುತ್ತದೆ. ಒಂದು ವೇಳೆ 8:30ರ ವೇಳೆಗೆ ಅಂಚೆ ಮತ ಎಣಿಕೆ ಆಗದಿದ್ದಲ್ಲಿ ಅದು ಮುಗಿಯುವವರೆಗೂ ಇವಿಎಂಗಳ ಮತ ಎಣಿಕೆ ಮಾಡಲಾಗುವುದಿಲ್ಲ. ಅಂಚೆ ಮತದ ಎಣಿಕೆ ಪೂರ್ಣಗೊಂಡ ನಂತರ ಇವಿಎಂಗಳ ಎಣಿಕೆ ಮಾಡಲಾಗುತ್ತದೆ. ಇವಿಎಂ ಮತ್ತು ವಿವಿಪ್ಯಾಟ್ ಯಂತ್ರದ ಸ್ಲಿಪ್ಗಳನ್ನು ಸಹ ಹೋಲಿಕೆ ಮಾಡಿದ ನಂತರವೇ ಫಲಿತಾಂಶ ಹೊರ ಬೀಳಲಿದೆ.
ಶಾಂತ ರೀತಿಯಲ್ಲಿ ಮತದಾನ: ನವೆಂಬರ್ 30 ರಂದು ಒಂದೇ ಹಂತದಲ್ಲಿ ತೆಲಂಗಾಣ ಮತದಾನ ನಡೆಯಿತು. ರಾಜ್ಯದಲ್ಲಿ ಒಟ್ಟಾರೆ ಶೇಕಡ 71.34 ಮತದಾನವಾಗಿದೆ. ಕ್ಷೇತ್ರವಾರು ಅತಿ ಹೆಚ್ಚು ಅಂದರೆ ಮುನುಗೋಡದಲ್ಲಿ ಶೇ.91.89ರಷ್ಟು ಮತದಾನವಾಗಿದೆ. ಅತ್ಯಂತ ಕಡಿಮೆ ಯಾಕುತ್ ಪುರದಲ್ಲಿ ಶೇ.39.64ರಷ್ಟು ಮತದಾನವಾಗಿದೆ.
ಪ್ರಸಕ್ತ ಚುನಾವಣೆಯಲ್ಲಿ ಒಟ್ಟು 2290 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 2068 ಪುರುಷರು, 221 ಮಹಿಳೆಯರು ಮತ್ತು ಒಬ್ಬರು ತೃತೀಯ ಲಿಂಗಿ ಕಣದಲ್ಲಿದ್ದಾರೆ. ಬಿಆರ್‌ಎಸ್ 119 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿಗಳು 118 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳು 111 ಸ್ಥಾನಗಳಲ್ಲಿ ಸ್ಪರ್ಧಿಸಿದ್ದಾರೆ. ಎಂಟು ಸ್ಥಾನಗಳಲ್ಲಿ ಜನಸೇನೆ ಸ್ಪರ್ಧಿಸುತ್ತಿದೆ. ಸಿಪಿಎಂ 19, ಸಿಪಿಐ ಒಂದು ಸ್ಥಾನ. ಬಿಎಸ್ಪಿಯಿಂದ 108 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ನಿಂತಿದ್ದಾರೆ. ಈ ಚುನಾವಣೆಯಲ್ಲಿ ಇತರ ಪಕ್ಷಗಳು ಮತ್ತು ಸ್ವತಂತ್ರರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದಾರೆ. ಎಲ್‌ಬಿ ನಗರದಲ್ಲಿ ಗರಿಷ್ಠ 48 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಕನಿಷ್ಠ ನಾರಾಯಣಪೇಟೆ ಮತ್ತು ಬಾನ್ಸ್‌ವಾಡದಲ್ಲಿ ಏಳು ಅಭ್ಯರ್ಥಿಗಳು ಮಾತ್ರ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಪುಟಿದೆದ್ದ ಬೆನ್ನಲ್ಲೇ ನೆರೆಯ ಒಡಿಶಾದತ್ತ ಕಾಂಗ್ರೆಸ್ ದೃಷ್ಟಿ: ಪುನಶ್ಚೇತನ ಕಾರ್ಯತಂತ್ರ ಏನು?