ETV Bharat / bharat

ಬೇಲಿಯೇ ಎದ್ದು ಬೆಳೆ ಮೇಯ್ದರೆ..: ಭ್ರಷ್ಟಾಚಾರ ಆರೋಪಗಳಿಂದ ತತ್ತರಿಸಿದ ಸಿಬಿಐ - ಸಿಬಿಐ ಅಧಿಕಾರಿಗಳ ಮೇಲೆ ಸಿಬಿಐ ದಾಳಿ

ಸಂಕ್ರಾಂತಿ ದಿನದಂದು ದೆಹಲಿ, ಗಾಜಿಯಾಬಾದ್, ನೋಯ್ಡಾ, ಮೀರತ್ ಮತ್ತು ಕಾನ್ಪುರ ಸೇರಿದಂತೆ 14 ಸ್ಥಳಗಳಲ್ಲಿ ತನ್ನ ಕಚೇರಿಗಳಲ್ಲಿ ಸಿಬಿಐ ವ್ಯಾಪಕ ತಪಾಸಣೆ ನಡೆಸಿತ್ತು.

cbi
cbi
author img

By

Published : Jan 22, 2021, 4:40 PM IST

ಹೈದರಾಬಾದ್: ಕೇಂದ್ರ ತನಿಖಾ ಸಂಸ್ಥೆಯು (ಸಿಬಿಐ – ಸೆಂಟ್ರಲ್‌ ಬ್ಯುರೊ ಆಫ್‌ ಇನ್ವೆಸ್ಟಿಗೇಶನ್‌) ಅಧಿಕಾರ ಮತ್ತು ಬಲದಿಂದ ಭ್ರಷ್ಟಾಚಾರವನ್ನು ನಿಯಂತ್ರಿಸುವ ದೊಡ್ಡ ಜವಾಬ್ದಾರಿ ಹೊತ್ತಿರುವ 'ಪ್ರತಿಷ್ಠಿತ' ಸಂಘಟನೆ. ಆದರೆ, ಅದೀಗ ತಾನೇ 'ಭ್ರಷ್ಟಾಚಾರ' ಆರೋಪಗಳಿಂದಾಗಿ ತತ್ತರಿಸುತ್ತಿದೆ! ಇದು ದ್ವೇಷಿಗಳು ಮಾಡಿದ ದುರುದ್ದೇಶಪೂರಿತ ಆರೋಪವಲ್ಲ. ಬದಲಾಗಿ, ಕೇಂದ್ರ ತನಿಖಾ ಸಂಸ್ಥೆ ಸ್ವತಃ ಪರಿಶೀಲಿಸಿ ಕಂಡುಕೊಂಡಿರುವ ಕಟು ಸತ್ಯ!

ಬ್ಯಾಂಕ್ ಹಗರಣಗಳ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಕೆಲವು ಕಂಪನಿಗಳೊಂದಿಗೆ ತನ್ನ ಕೆಲವು ಅಧಿಕಾರಿಗಳು ಕೈ ಜೋಡಿಸಿದ್ದು, ಭ್ರಷ್ಟ ವಿಧಾನಗಳ ಮೂಲಕ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಎಂಟು ಪುಟಗಳ ಮೊದಲ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಸಿಬಿಐ ಸ್ಪಷ್ಟಪಡಿಸಿದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಡಿಎಸ್‌ಪಿಗಳು ಸೇರಿದಂತೆ ಸಿಬಿಐನ ನಾಲ್ವರು ಸಿಬ್ಬಂದಿ ಮತ್ತು ವಕೀಲರು ಸೇರಿದಂತೆ ಕೆಲವು ಖಾಸಗಿ ವ್ಯಕ್ತಿಗಳ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.

ಸಂಕ್ರಾಂತಿ ದಿನದಂದು ದೆಹಲಿ, ಗಾಜಿಯಾಬಾದ್, ನೋಯ್ಡಾ, ಮೀರತ್ ಮತ್ತು ಕಾನ್ಪುರ ಸೇರಿದಂತೆ 14 ಸ್ಥಳಗಳಲ್ಲಿ ತನ್ನ ಕಚೇರಿಗಳಲ್ಲಿ ಸಿಬಿಐ ವ್ಯಾಪಕ ತಪಾಸಣೆ ನಡೆಸಿತ್ತು. ಸಿಬಿಐ ಇನ್ಸ್‌ಪೆಕ್ಟರ್ ಕಪಿಲ್ ಧಂಕಡ್ ಅವರು ನಿರ್ಣಾಯಕ ಮಾಹಿತಿಯನ್ನು ರವಾನಿಸಿದ್ದಕ್ಕಾಗಿ ಉನ್ನತ ಅಧಿಕಾರಿಗಳಿಂದ ಹಲವಾರು ಕಂತುಗಳಲ್ಲಿ ರೂ. 16 ಲಕ್ಷ ಪಡೆದಿದ್ದಾರೆ, ಇಬ್ಬರು ಡಿಎಸ್‌ಪಿಗಳು ಇಬ್ಬರು ವಕೀಲರಿಂದ ತಲಾ 15 ಲಕ್ಷ ರೂ. ಹಾಗೂ ಮಧ್ಯವರ್ತಿಗಳಿಂದ ಒಪ್ಪಂದ ಕುದುರಿಸಿರುವ ಕುರಿತ ವಿಶ್ಲೇಷಣಾತ್ಮಕ ವಿವರಣೆಗಳು ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಸಂಸ್ಕೃತಿಯು ಆಳವಾಗಿ ಬೇರೂರಿದ್ದಕ್ಕೆ ಸ್ಪಷ್ಟ ಉದಾಹರಣೆಗಳಾಗಿವೆ. ಲಕ್ಷಾಂತರ ರೂಪಾಯಿಗಳು ಕೈ ಬದಲಾಯಿಸುವುದು, ದೇಶದ ಪ್ರತಿಷ್ಠೆಗೆ ಕಳಂಕ ತರುವ ರೀತಿ, ವಿಚಾರಣೆಯ ಮೇಲೆ ಪ್ರಭಾವ ಬೀರುವ ಅವಕಾಶಗಳು ಹಾಗೂ ಹೆಚ್ಚುತ್ತಲೇ ಇರುವ ಪ್ರಕರಣಗಳ ತನಿಖೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಹ ಆಘಾತಕಾರಿ ಬೆಳವಣಿಗೆಯಾಗಿವೆ.

ಐವತ್ತೇಳು ವರ್ಷಗಳ ಹಿಂದೆ, ಸರ್ವ ಮೂರ್ಖರ ದಿನ ಎಂದು ಪರಿಗಣಿಸಲಾದ (ಏಪ್ರಿಲ್‌ ೧) ದಿನದಂದು ಅಸ್ತಿತ್ವಕ್ಕೆ ಬಂದ ಕೇಂದ್ರ ತನಿಖಾ ದಳ (ಸಿಬಿಐ), ಕೇಂದ್ರ ಸರ್ಕಾರದ ಕೈಯೊಳಗಿನ ಅತ್ಯಂತ ಭ್ರಷ್ಟ ಸಾಧನ ಎಂಬ ಅಪಕೀರ್ತಿಗೆ ಒಳಗಾಗಿ ಅಧಃಪತನಕ್ಕೆ ಇಳಿಯಲ್ಪಟ್ಟಿತು ಹಾಗೂ ಶ್ರೀಮತಿ ಇಂದಿರಾ ಗಾಂಧಿ ಅವರ ಪ್ರಧಾನಮಂತ್ರಿತ್ವದ ಅವಧಿಯಲ್ಲಿ ಅತ್ಯಂತ ಭ್ರಷ್ಟವಾಯಿತು. ಈ ತನಿಖಾ ಸಂಸ್ಥೆ ಕೇಂದ್ರ ಸರ್ಕಾರದ ಪಂಜರದೊಳಗಿನ ಗಿಳಿಯಾಗಿ ಮಾರ್ಪಟ್ಟಿದೆ ಎಂದು ನ್ಯಾಯಾಲಯಗಳೇ ಹಲವಾರು ಬಾರಿ ಟೀಕಿಸಿವೆ. ಕೇಂದ್ರೀಯ ತನಿಖಾ ದಳವು ರಾಜಕೀಯ ಹಸ್ತಕ್ಷೇಪವನ್ನು ಮೀರಿ ನಿಂತು ಬಲವಾದ ತನಿಖಾ ಸಂಸ್ಥೆಯಾಗಿ ಹೊಮ್ಮಬೇಕು ಹಾಗೂ ಅದರ ಕಾರ್ಯವಿಧಾನವು ಎಲ್ಲರ ಮೆಚ್ಚುಗೆಯನ್ನು ಗಳಿಸುವಂತಾಗಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ಸುಧಾರಿಸಿಕೊಳ್ಳುವುದರಿಂದ ಅದು ಸದಾ ತಪ್ಪಿಸಿಕೊಳ್ಳುತ್ತಲೇ ಇದೆ. ರಾಜಕೀಯ ಒತ್ತಡಗಳು ಮತ್ತು ಇತರ ಕಾರಣಗಳಿಂದಾಗಿ ಅನೇಕ ಪ್ರಕರಣಗಲ್ಲಿ ಸೋಲುಂಟಾಗಿದೆ. ಸಂಸ್ಥೆಯನ್ನು ಸದ್ಯ ಕಾಡುತ್ತಿರುವ ಕಾಯಿಲೆಗೆ ಪ್ರಕರಣಗಳ ಹಿಂದೆ ನಾಯಕತ್ವದ ಒಳಗೊಳ್ಳುವಿಕೆ ಇದೆ ಎಂಬುದಷ್ಟೇ ಅಲ್ಲ, ಅತಿರೇಕದ ಭ್ರಷ್ಟ ವಿಧಾನಗಳು ಸಹ ಮುಖ್ಯ ಕಾರಣಗಳು ಎಂಬ ವ್ಯಾಪಕ ಅನುಮಾನಗಳು ಬೆಳೆಯುತ್ತಿವೆ.

ಪ್ರಾಮಾಣಿಕತೆ, ಔದ್ಯಮಶೀಲತೆ, ನಿಷ್ಪಕ್ಷಪಾತತನ ತನ್ನ ಮೂರು ಮಾರ್ಗದರ್ಶಿ ದೀಪಗಳು ಎಂದು ಸಿಬಿಐ ಹೆಮ್ಮೆಯಿಂದ ಹೇಳುತ್ತದೆ!

ತನ್ನ ರಾಜಕೀಯ ಧಣಿಗಳು ಹೇಳಿದಂತೆ ನಡೆಯುವುದಕ್ಕೆ ಹೆಸರುವಾಸಿಯಾಗಿರುವ ಸಿಬಿಐ, ತಾನೊಂದು ಬೆನ್ನೆಲುಬು ಇಲ್ಲದ ಸಂಸ್ಥೆ ಎಂಬುದನ್ನು ಯಾವುದೇ ನಾಚಿಕೆಯಿಲ್ಲದೇ ಪದೇ ಪದೇ ಸಾಬೀತುಪಡಿಸಿದೆ. ಸುಮಾರು ಎರಡು ವರ್ಷಗಳ ಹಿಂದೆ ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ತಾನಾ ನಡುವಿನ ತೀವ್ರ ವಾಗ್ವಾದವು ಇಡೀ ಸಂಘಟನೆಯನ್ನೇ ಅಲ್ಲಾಡಿಸಿಬಿಟ್ಟಿತ್ತು. ಆ ಸಮಯದಲ್ಲಿ, ಅಸ್ತಾನಾ ಅವರು ಮೊಯಿನ್ ಖುರೇಷಿ ಎಂಬ ಮಾಂಸ ವ್ಯಾಪಾರಿ ವಿರುದ್ಧ ಇದ್ದ ವಿವಿಧ ಆರೋಪಗಳ ಕುರಿತು ವಿಚಾರಣೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದರು. ಕೆಲವೇ ತಿಂಗಳುಗಳಲ್ಲಿ ನಿವೃತ್ತರಾಗಲಿದ್ದ ಅಧಿಕಾರಿ ಅಲೋಕ್ ವರ್ಮಾ ನೇತೃತ್ವದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಹಾಗೆ ನೋಡಿದರೆ, ಆ ಭ್ರಷ್ಟಾಚಾರ ಪ್ರಕರಣದ ಮುಖ್ಯ ಅಪರಾಧಿ ಬೇರೆ ಯಾರೂ ಅಲ್ಲ, ವಿಶೇಷ ನಿರ್ದೇಶಕ ಎಂಬ ಅಧಿಕಾರದಲ್ಲಿ ಇಡೀ ವ್ಯವಸ್ಥೆಯನ್ನು ಆಳುತ್ತಿದ್ದ ಅಸ್ತಾನಾ! ತಾನು ಸಿಬಿಐ ಬಲೆಯಿಂದ ಹೊರಬರಲು 3 ಕೋಟಿ ರೂ. ನೀಡಿದ್ದರೂ ಕೂಡಾ, ಸಿಬಿಐ ಅಧಿಕಾರಿಗಳು ಇನ್ನೂ ಕಿರುಕುಳ ನೀಡುತ್ತಿದ್ದಾರೆ ಎಂದು ಸತೀಶ್ ಎಂಬ ವ್ಯಕ್ತಿ ಆ ದಿನಗಳಲ್ಲಿ ನೀಡಿದ್ದ ಪ್ರಮಾಣಿತ ಹೇಳಿಕೆಯು ಆ ದಿನಗಳಲ್ಲಿ ಭಾರಿ ಕೋಲಾಹಲವನ್ನು ಸೃಷ್ಟಿಸಿತ್ತು. ಆ ಪ್ರಕರಣದಲ್ಲಿ ರಾಕೇಶ್‌ ಅಸ್ತಾನಾ ತಪ್ಪಿತಸ್ಥರಲ್ಲ ಎಂದು ಕಳೆದ ಮಾರ್ಚ್‌ ತಿಂಗಳಲ್ಲಿ ಸಿಬಿಐ ನೀಡಿದ ನಿರಪರಾಧಿ ಹೇಳಿಕೆಯ ಆಧಾರದ ಮೇಲೆ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣವನ್ನು ಕೈಬಿಡುವ ಮೂಲಕ ಈ ವಿವಾದ ಅಧಿಕೃತವಾಗಿ ತಣ್ಣಗಾಯಿತು. ಈ ಪ್ರಕರಣದಲ್ಲಿ ಲಂಚದ ಕೈವಾಡವಿತ್ತು ಹಾಗೂ ಮತ್ತಷ್ಟು ಲಂಚಕ್ಕಾಗಿ ಬೇಡಿಕೆ ಇಡಲಾಗಿತ್ತು ಎಂಬ ಆರೋಪಗಳಿದ್ದಾಗ್ಯೂ ಯಾರೊಬ್ಬರನ್ನೂ ತಪ್ಪಿತಸ್ಥರೆಂದು ಸಾಬೀತುಪಡಿಸಲು ಆಗಲೇ ಇಲ್ಲ.

ಈಗ, ಮುಂಬೈ ಮತ್ತು ಉತ್ತರ ಪ್ರದೇಶದಲ್ಲಿ ಭುಗಿಲೆದ್ದಿರುವ ಬಹುಕೋಟಿ ರೂಪಾಯಿ ಬ್ಯಾಂಕ್ ಹಗರಣಗಳಲ್ಲಿ, ಅನೇಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆ. ಆದರೆ, ಕೊನೆಯಲ್ಲಿ ಏನಾಗುತ್ತದೆ ಎಂಬುದನ್ನು ಯಾರು ಬಲ್ಲರು? ಅಪರಾಧ ನಿಜ ಹಾಗೂ ಆರೋಪ ಸುಳ್ಳು ಎಂದು ಸಾಬೀತುಪಡಿಸುವಲ್ಲಿ ಸಿಬಿಐ ಹೆಚ್ಚು ಪರಿಣತಿ ಹೊಂದಿದೆ. ಹೀಗಿರುವಾಗ ಇಲಾಖೆಯ ಕಳ್ಳರ ವಿಷಯದಲ್ಲಿ ಇದರ ನಿಲುವು ವಿಭಿನ್ನವಾಗಿರುತ್ತದೆಯೇ ಎಂಬುದು ನಿಜಕ್ಕೂ ತೊಡಕಿನ ಪ್ರಶ್ನೆ

ಭೂಪಿಂದರ್ ಸಿಂಗ್ ಹೂಡಾ ಸರ್ಕಾರ ಗುರುಗ್ರಾಮದಲ್ಲಿ 14,000ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ವಿವಾದಕ್ಕೆ ಸಂಬಂಧಿಸಿದಂತೆ ಸಿಬಿಐ ನಿರ್ಲಕ್ಷ್ಯದಿಂದ ವರ್ತಿಸುತ್ತಿದೆ ಎಂದು 2019ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. 2009ರ ಪ್ರಕರಣ ಇಷ್ಟು ವರ್ಷಗಳ ಇನ್ನೂ ಎಳೆದುಕೊಂಡು ಬಂದಿರುವುದನ್ನು ಅದು ಬಲವಾಗಿ ಆಕ್ಷೇಪಿಸಿತು. ಇದು ಸಿಬಿಐನ 'ದಕ್ಷತೆ' ಆಗಿರುವುದರಿಂದ, ಈಗ ತನ್ನದೇ ಸಂಸ್ಥೆಯ ವಿರುದ್ಧದ ಪ್ರಕರಣಗಳ ತನಿಖೆಯನ್ನು ಅದು ಎಷ್ಟು ಪರಿಣಾಮಕಾರಿಯಾಗಿ ನಡೆಸುತ್ತದೆ ಎಂಬುದನ್ನು ಗಮನಿಸಿ ನೋಡಬೇಕಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ 36 ಸಿಬಿಐ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರಕಾರ ಹೇಳುತ್ತದೆ. ಈ ಪಟ್ಟಿ ಕೊನೆಯಿಲ್ಲದಂತೆ ಬೆಳೆಯುತ್ತಲೇ ಇದೆ. ಒಂದೂವರೆ ದಶಕಗಳ ಅಂತರದ ನಂತರ, ಸಿಬಿಐ ಇತ್ತೀಚೆಗೆ ತನ್ನ ಅಪರಾಧ ಕೈಪಿಡಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಅದರ ಪ್ರಕಾರ ಇನ್ನು ಮುಂದೆ, ಭ್ರಷ್ಟಾಚಾರ ತಡೆ ಕಾಯ್ದೆ (ಪಿಸಿ ಆಕ್ಟ್ – ಪ್ರಿವೆಂನ್ಷನ್‌ ಆಫ್‌ ಕರಪ್ಷನ್‌ ಆಕ್ಟ್‌) ಅಡಿ ಎಲ್ಲಾ ತನಿಖೆಗಳು, ಅತಿ ಹೆಚ್ಚೆಂದರೆ, ಒಂಬತ್ತು ತಿಂಗಳಲ್ಲಿ ಪೂರ್ಣಗೊಳ್ಳಬೇಕಿದೆ. ಈ ಗಡುವನ್ನು ಸಿಬಿಐ ತನ್ನ ಆಂತರಿಕ ಕಳ್ಳರಿಗೆ ಅನ್ವಯಿಸಿ ಯಶಸ್ವಿಯಾದರೆ ಮಾತ್ರ ಅದರ ವಿಶ್ವಾಸಾರ್ಹತೆ ಸುಧಾರಿಸುತ್ತದೆ.

ಹತ್ತು ವರ್ಷಗಳ ಹಿಂದೆ, ಪಿಜೆ ಥಾಮಸ್ ಅವರನ್ನು ಕೇಂದ್ರ ವಿಚಕ್ಷಣಾ ಏಜೆನ್ಸಿಯ (ಸಿವಿಸಿ – ಸೆಂಟ್ರಲ್‌ ವಿಜಿಲೆನ್ಸ್‌ ಏಜೆನ್ಸಿ) ಮುಖ್ಯಸ್ಥರನ್ನಾಗಿ ನೇಮಕ ಮಾಡುವುದನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು. ತನ್ನ ವಿರುದ್ಧ ಪ್ರಕರಣಗಳನ್ನು ಹೊಂದಿರುವ ವ್ಯಕ್ತಿಯೊಬ್ಬ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿರುವ ಅತ್ಯುನ್ನತ ಪ್ರಾಧಿಕಾರದ ನೇತೃತ್ವವನ್ನು ಹೇಗೆ ವಹಿಸಿಕೊಳ್ಳುತ್ತಾನೆ ಎಂದು ಅದು ಪ್ರಶ್ನಿಸಿತ್ತು. ಭ್ರಷ್ಟಾಚಾರ ಪ್ರಕರಣಗಳನ್ನು ಬಹಿರಂಗಪಡಿಸುವ ಜವಾಬ್ದಾರಿ ಹೊತ್ತಿರುವ ಸಿಬಿಐ, ಸೈಬರ್ ಆರ್ಥಿಕ ಅಪರಾಧಗಳನ್ನು ಎಸಗಿರುವ ಆಂತರಿಕ ಅಪರಾಧಿಗಳನ್ನು ಸಹ ಕಠಿಣವಾಗಿ ಶಿಕ್ಷಿಸಬೇಕು.

ಅಮೆರಿಕದಲ್ಲಿ ಎಫ್‌ಬಿಐ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಮತ್ತು ಸಿಐಎ (ಕೇಂದ್ರ ಗುಪ್ತಚರ ಸಂಸ್ಥೆ) ಗಳನ್ನು ವಿಶೇಷ ಕಾನೂನೊಂದು ನಿಯಂತ್ರಿಸುತ್ತದೆ. ರಷ್ಯಾ, ಜರ್ಮನಿ ಮತ್ತು ಜಪಾನ್‌ನಲ್ಲಿ ಸಹ ವಿಚಕ್ಷಣಾ ಏಜೆನ್ಸಿಗಳು ಕೆಲವು ನಿಯಮಗಳು ಮತ್ತು ನಿಬಂಧನೆಗಳ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಿವೆ. ಆದರೆ, ಭಾರತದಲ್ಲಿ ಮಾತ್ರ ಆ ರೀತಿ ಇಲ್ಲವೇ ಇಲ್ಲ. ಒಂದು ಕಡೆ ರಾಜಕೀಯ ಹಸ್ತಕ್ಷೇಪ ಹಾಗೂ ಮತ್ತೊಂದೆಡೆ ಪರಿಣಾಮ ಬೀರದಂತಹ ತನಿಖಾ ಕಾರ್ಯವಿಧಾನದಿಂದ ಸಿಬಿಐ ವಿರೂಪಗೊಂಡುಬಿಟ್ಟಿದೆ ಹಾಗೂ ಸಾರ್ವಜನಿಕರಲ್ಲಿ ನಗೆಪಾಟಲಿಗೆ ಈಡಾಗಿದೆ. ಭ್ರಷ್ಟಾಚಾರವನ್ನು ನಿಯಂತ್ರಿಸುವ ನಿರ್ದಿಷ್ಟ ಉದ್ದೇಶದಿಂದ ರಚಿಸಲಾದ ಸಂಸ್ಥೆಯೊಂದು ಸ್ವತಃ ತಾನೇ ಭ್ರಷ್ಟಾಚಾರದ ಆರೋಪಗಳಲ್ಲಿ ಕತ್ತುಪೂರ್ತಿ ಮುಳುಗಿರುವುದಕ್ಕಿಂತ ಹೆಚ್ಚು ದುರದೃಷ್ಟಕರವಾದದು ಇನ್ನೇನಿದೆ?

ಅಶಿಸ್ತು ತೋರುವ ನೌಕರರಿಗೆ ಶಿಕ್ಷೆ ಕಠಿಣವಾಗಿ ಮತ್ತು ಶೀಘ್ರವಾಗಿ ದೊರಕಿದಾಗ ಮಾತ್ರ ಇತರರು ತಿದ್ದಿಕೊಳ್ಳುತ್ತಾರೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗುವ ಧೈರ್ಯ ಮಾಡುವುದಿಲ್ಲ. ಹಾಗೆ ಮಾಡುವ ಮೂಲಕ ಮಾತ್ರ ಸಿಬಿಐ ತನ್ನ ವರ್ಚಸ್ಸನ್ನು ಸುಧಾರಿಸಿಕೊಳ್ಳಬಹುದು ಹಾಗೂ ಕಳೆದುಹೋದ ವೈಭವವನ್ನು ಮರಳಿ ಪಡೆಯಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.