ಪುಣೆ(ಮಹಾರಾಷ್ಟ್ರ): ದಿನೇ ದಿನೆ ಓಮಿಕ್ರಾನ್ ಭೀತಿ ಹೆಚ್ಚುತ್ತಿದ್ದು, ಹೊರದೇಶಗಳಿಂದ ಆಗಮಿಸುತ್ತಿರುವವರ ಮೇಲೆ ನಿಗಾ ಇಡಲಾಗುತ್ತಿದೆ. ಉಗಾಂಡ ಪ್ರಯಾಣದ ಇತಿಹಾಸ ಹೊಂದಿರುವ ನಾಲ್ವರು ಸತಾರಾ ಜಿಲ್ಲೆಯ ಫಲ್ತಾನ್ಗೆ ಆಗಮಿಸಿದ್ದು, ಮೂವರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಸೋಮವಾರದಂದು ತಿಳಿಸಿದ್ದಾರೆ. ಇದರಿಂದ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾಲ್ವರ ಮಾದರಿಗಳನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ (ಎನ್‌ಐವಿ)ಗೆ ಕಳುಹಿಸಲಾಗಿದೆ ಎಂದು ಸತಾರಾ ಜಿಲ್ಲಾ ಸಿವಿಲ್ ಸರ್ಜನ್ ತಿಳಿಸಿದ್ದಾರೆ.
ದಂಪತಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಡಿಸೆಂಬರ್ 9 ರಂದು ಉಗಾಂಡದಿಂದ ಫಲ್ತಾನ್ಗೆ ಬಂದರು. ನಂತರ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ದಂಪತಿ ಮತ್ತು ಹಿರಿಯ ಮಗಳಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಕಿರಿಯ ಮಗಳಿಗೆ ಸೋಂಕು ಅಂಟಿಲ್ಲ ಎಂದು ಸಿವಿಲ್ ಸರ್ಜನ್ ಡಾ. ಸುಭಾಷ್ ಚವಾಣ್ ಹೇಳಿದ್ರು.
ನಾಲ್ವರನ್ನು ಪ್ರಸ್ತುತ ಫಲ್ತಾನ್ ಉಪ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಯಾವುದೇ ರೋಗ ಲಕ್ಷಣಗಳನ್ನು ಹೊಂದಿಲ್ಲ. ಎಲ್ಲರ ಸ್ಯಾಂಪಲ್ಸ್ ಅನ್ನು ಜಿನೋಮ್ ಸೀಕ್ವೆನ್ಸಿಂಗ್ಗಾಗಿ ಎನ್‌ಐವಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: India Corona Update: ದೇಶದಲ್ಲಿ ದೈನಂದಿನ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ
ಮಹಾರಾಷ್ಟ್ರದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಶೇ.20 ರಷ್ಟಿದೆ ಎಂದು ಸೋಮವಾರದಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.