ಪಿಲಿಭಿಟ್ (ಉತ್ತರ ಪ್ರದೇಶ): ಇಲ್ಲಿನ ಬಿಸಾಲ್ಪುರ್ ಪ್ರದೇಶದ ಪಿಲಿಭಿಟ್ನಲ್ಲಿ ಪತ್ತೆಯಾಗಿದ್ದ ಸಹೋದರಿಯರ ಮೃತದೇಹ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಜಸೌಲಿ ಗ್ರಾಮದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಸಹೋದರಿಯರ ಮೃತದೇಹ ಪತ್ತೆಯಾಗಿತ್ತು. ಬಳಿಕ ಪೊಲೀಸರು ಎರಡೂ ಶವಗಳನ್ನೂ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಅಲ್ಲದೆ ಬಿಸಾಲ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.
ಕುಟುಂಬಸ್ಥರ ಕೈವಾಡ ಶಂಕೆ
ಇತ್ತ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಕುಟುಂಬಸ್ಥರ ಹೇಳಿಕೆ ಅನುಮಾನ ತರಿಸಿತ್ತು. ಅಲ್ಲದೆ ಈ ಕೊಲೆಯಲ್ಲಿ ಕುಟುಂಬಸ್ಥರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ವಿವರಣೆ ನೀಡುವುದಾಗಿ ತಿಳಿಸಿದ್ದಾರೆ. ಮೃತದೇಹ ಸಿಕ್ಕ ಬಳಿಕ ಪೊಲೀಸರಿಗೆ ಮಾಹಿತಿ ನೀಡದೆ ಮೃತದೇಹಗಳನ್ನು ಅವರು ಸಾಗಿಸಿದ್ದರು. ಇದೊಂದು ಮರ್ಯಾದಾ ಹತ್ಯೆ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಿಎಂ ಆದೇಶದಂತೆ ವಿಶೇಷ ತಂಡ ರಚನೆ
ಸಹೋದರಿಯರ ಮೃತದೇಹ ಪತ್ತೆಯಾಗುತ್ತಿದ್ದಂತೆ ಸಿಎಂ ಸೂಚನೆ ಮೇರೆಗೆ ಡಿಜಿಐ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ತನಿಖೆಗಾಗಿ ವಿಶೇಷ ತಂಡ ಸಹ ರಚಿಸಿದ್ದಾರೆ.
ಈ ಘಟನೆ ಕುರಿತು ಮಾತನಾಡಿದ ಎಸ್ಪಿ ಜಯಪ್ರಕಾಶ್, ತನಿಖೆ ಚುರುಕುಗೊಂಡಿದೆ. ಸಹೋದರಿಯರ ಮೃತದೇಹ ಪತ್ತೆಯಾಗಿದ್ದರೂ ಪೊಲೀಸರಿಗೆ ದೂರು ನೀಡಿರಲಿಲ್ಲ. ಹೀಗಾಗಿ ಮೊದಲಿನಿಂದಲೂ ಕುಟುಂಬಸ್ಥರ ಮೇಲೆ ಅನುಮಾನವಿದೆ. ಸಂಪೂರ್ಣ ತನಿಖೆಯ ಬಳಿಕ ಈ ಕುರಿತು ಮಾಹಿತಿ ನೀಡುತ್ತೇವೆ ಎಂದಿದ್ದಾರೆ.
ಏನಿದು ಘಟನೆ..?
ಮಾ. 24ರಂದು ಪೂಜಾ ಹಾಗೂ ಅನ್ಸಿಕಾ ಎಂಬುವರ ಮೃತದೇಹಗಳು ಜಮೀನಿನಲ್ಲಿ ಪತ್ತೆಯಾಗಿದ್ದವು. ಅನ್ಸಿಕಾ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಪೂಜಾಳ ದೇಹ ನೆಲದ ಮೇಲಿತ್ತು. ಕುತ್ತಿಗೆ ಬಳಿ ಗಾಯವಾಗಿದ್ದು ಬಿಟ್ಟರೆ ಬೇರೆ ಎಲ್ಲೂ ಗಾಯದ ಗುರುತು ಇರಲಿಲ್ಲ. ಅಲ್ಲದೆ ಇಬ್ಬರು ಲೈಂಗಿಕ ಕಿರುಕುಳಕ್ಕೂ ಒಳಗಾಗಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.
ಇದನ್ನೂ ಓದಿ: ಯುವಕನಿಂದ ಕಿರುಕುಳ ಆರೋಪ: ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ-ಮಗಳ ಮೃತದೇಹ ಪತ್ತೆ