ದಿಯೋಘರ್ (ಜಾರ್ಖಂಡ್): ದ್ವೇಷದ ಹಿನ್ನೆಲೆಯಲ್ಲಿ ನಡೆದ ಚಕಮಕಿಯಲ್ಲಿ ಮೀನು ಉದ್ಯಮಿಯ ಅಂಗರಕ್ಷರಾಗಿದ್ದ ಇಬ್ಬರು ಪೊಲೀಸರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ಜಾರ್ಖಂಡ್ನಲ್ಲಿ ಶನಿವಾರ ರಾತ್ರಿ ನಡೆದಿದೆ. ಇದು ಪೂರ್ವನಿಯೋಜಿತ ಎನ್‌ಕೌಂಟರ್ ಅಥವಾ ತಿಕ್ಕಾಟದಲ್ಲಿ ನಡೆದ ದಾಳಿಯೋ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉದ್ಯಮಿಯ ಅಂಗರಕ್ಷಕರಾಗಿ ನಿಯೋಜಿಸಲಾಗಿದ್ದ ಸಂತೋಷ್ ಯಾದವ್ ಮತ್ತು ರವಿ ಮಿಶ್ರಾ ಮೃತರು. ಇವರು ದಿಯೋಘರ್ನ ಮೀನು ಉದ್ಯಮಿ ಸುಧಾಕರ್ ಝಾ ಅವರ ಭದ್ರತೆಯಲ್ಲಿ ನಿರತರಾಗಿದ್ದರು. ಶ್ಯಾಮಗಂಜ್ ರಸ್ತೆಯಲ್ಲಿ ಶನಿವಾರ ಮಧ್ಯರಾತ್ರಿ 12.30ರ ಸುಮಾರಿಗೆ ದುಷ್ಕರ್ಮಿಗಳು ಉದ್ಯಮಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದಾರೆ.
ಆದರೆ, ದುಷ್ಕರ್ಮಿಗಳ ತೀವ್ರ ಗುಂಡಿನ ದಾಳಿಯಲ್ಲಿ ಇಬ್ಬರೂ ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಿಯೋಘರ್‌ನಲ್ಲಿ ನಡೆದ ಗುಂಡಿನ ದಾಳಿಯು ಉದ್ಯಮಿಗಳ ನಡುವಿನ ಪ್ರಾಬಲ್ಯಕ್ಕಾಗಿ ನಡೆದ ಕಾದಾಟವಾಗಿದೆ. ಉದ್ಯಮಿಯನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದಾಗ ತಡೆಯಲು ಹೋದ ಪೊಲೀಸರು ಬಲಿಯಾಗಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. "ದಿಯೋಘರ್‌ನಲ್ಲಿ ನಡೆದ ಈ ಎನ್‌ಕೌಂಟರ್ ಘಟನೆಯ ತನಿಖೆ ಆರಂಭವಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಎನ್‌ಕೌಂಟರ್‌ನಲ್ಲಿ ಕ್ರಿಮಿನಲ್‌ಗಳ ಗುಂಡಿಗೆ ಬಲಿಯಾದ ಇಬ್ಬರೂ ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆಯಾದ ಸಿಬ್ಬಂದಿ ಸಾಹಿಬ್‌ಗಂಜ್ ನಿವಾಸಿಗಳು. ದಾಳಿಯ ವೇಳೆ ಮೀನು ಉದ್ಯಮಿ ಸುಧಾಕರ್ ಝಾ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆಯಲ್ಲಿ ಕೆಲವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಎಸ್ಪಿ ಸುಭಾಷ್ ಚಂದ್ರ ಜಾಟ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಈ ಹಿಂದೆಯೂ ಕೂಡ ಉದ್ಯಮಿಯ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಹಲ್ಲೆ ನಡೆಸಿದ್ದರು. ಸುಲಿಗೆ ಮತ್ತು ಅಧಿಕಾರ ಸ್ಥಾಪನೆಯ ವಿಚಾರದಲ್ಲಿ ಜಗಳ ನಡೆದಿತ್ತು. ಈ ಬಾರಿಯೂ ಅದೇ ಕಾರಣಕ್ಕಾಗಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪದೇ ಪದೆ ದಾಳಿ ನಡೆಯುತ್ತಿದ್ದ ಕಾರಣಕ್ಕಾಗಿ ಉದ್ಯಮಿ ಸುಧಾಕರ್ಗೆ ಇಬ್ಬರು ಪೊಲೀಸರನ್ನು ಅಂಗರಕ್ಷಕರನ್ನಾಗಿ ನೇಮಿಸಲಾಗಿತ್ತು. ಅವರನ್ನೇ ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ.
ನಕ್ಸಲ್ ನಾಯಕನ ಕೊಂದ ಪೊಲೀಸರು: ಕೆಲ ದಿನಗಳ ಹಿಂದೆ ರಾಂಚಿಯಲ್ಲಿ ನಕ್ಸಲರು ಮತ್ತು ಪೊಲೀಸರು ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ನಕ್ಸಲೀಯ ಸಂಘಟನೆ ಪಿಎಲ್‌ಎಫ್‌ಐನ ಕಮಾಂಡರ್ ಆಗಿದ್ದ ವಿಶಾಲ್ ಸಾಹು ಎಂಬಾತನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ವಿಶಾಲ್ ಅವರ ತಂಡ ಇಲ್ಲಿನ ಠಾಕೂರ್ ಗ್ರಾಮ ಪ್ರದೇಶದಲ್ಲಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ಮೇಲೆ ನಕ್ಸಲರು ಗುಂಡು ಹಾರಿಸಿದ್ದರು. ಪ್ರತಿದಾಳಿಯಲ್ಲಿ ನಕ್ಸಲ್ ಕಮಾಂಡರ್ ಹತ್ಯೆಯಾಗಿದ್ದ.
40 ಸುತ್ತಿನ ಗುಂಡಿನ ಚಕಮಕಿ: ಪೊಲೀಸರು ಮತ್ತು ನಕ್ಸಲರ ಮಧ್ಯೆ 40 ಸುತ್ತಿನ ಗುಂಡಿನ ದಾಳಿ ನಡೆದಿತ್ತು. ಪೊಲೀಸ್ ಫೈರಿಂಗ್‌ಗೆ ಕಮಾಂಡರ್ ವಿಶಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೊಲೀಸರ ದಾಳಿ ಕಂಡು ನಕ್ಸಲರು ಕಾಡಿನೊಳಗೆ ಓಡಿದರು.
ಇದನ್ನೂ ಓದಿ: ಆಂಬ್ಯುಲೆನ್ಸ್ಗಾಗಿ ಪರದಾಟ: ತಳ್ಳುವ ಗಾಡಿಯಲ್ಲೇ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದ ಬಾಲಕ