ಶ್ರೀನಗರ: ಇಂದು ಸಂಜೆ ಕಾಶ್ಮೀರದ ಶ್ರೀನಗರ ಜಿಲ್ಲೆಯ ಸರಾಫ್ ಕಡಲ್ ಪ್ರದೇಶದಲ್ಲಿ ಸಿಆರ್‌ಪಿಎಫ್ ಪಡೆ ಮೇಲೆ ಅಪರಿಚಿತ ಉಗ್ರರು ದಾಳಿ ನಡೆಸಿದ್ದು, ಓರ್ವ ಪೊಲೀಸ್ ಮತ್ತು ನಾಗರಿಕ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ ಸರಾಫ್ ಕಡಲ್‌ನಲ್ಲಿ ಪೊಲೀಸರು ಮತ್ತು 23ನೇ ಬೆಟಾಲಿಯನ್ ಸಿಆರ್‌ಪಿಎಫ್‌ನ ಮೇಲೆ ಉಗ್ರರು ಗ್ರೆನೇಡ್ ಅನ್ನು ಎಸೆದಿದ್ದಾರೆ. ಇದರ ಪರಿಣಾಮವಾಗಿ ಇಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಗಾಯಗೊಂಡವರನ್ನು ಮೆರಾಜ್ ಅಹ್ಮದ್ ಮತ್ತು ಸರ್ತಾಜ್ ಅಹ್ಮದ್ ಎಂದು ಗುರುತಿಸಲಾಗಿದೆ.
ಉಗ್ರರು ಈ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ದಾಳಿಕೋರರನ್ನು ಹಿಡಿಯಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.