ನವ ದೆಹಲಿ: ಸರ್ಕಾರಿ ನೌಕರನೊಬ್ಬನ ವಿರುದ್ಧ ಯಾವುದೇ ನೇರ ಮೌಖಿಕ ಅಥವಾ ದಾಖಲೆ ರೂಪದ ಸಾಕ್ಷ್ಯಗಳಿಲ್ಲದಿದ್ದರೂ, ಸಾಂದರ್ಭಿಕ ಪುರಾವೆಗಳ ಆಧಾರದ ಮೇಲೆ ಭ್ರಷ್ಟಾಚಾರ ಪ್ರಕರಣದಲ್ಲಿ ಸರ್ಕಾರಿ ನೌಕರನೊಬ್ಬನಿಗೆ ಶಿಕ್ಷೆ ವಿಧಿಸಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಭ್ರಷ್ಟ ಸರ್ಕಾರಿ ನೌಕರರನ್ನು ಕಾನೂನು ಕ್ರಮದೊಳಗೆ ತಂದು ಶಿಕ್ಷೆಗೆ ಗುರಿಪಡಿಸುವಂತೆ ದೂರುದಾರರು ಮತ್ತು ಪ್ರಾಸಿಕ್ಯೂಷನ್ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ಮೂಲಕ ಆಡಳಿತ ಮತ್ತು ಸರ್ಕಾರಿ ವ್ಯವಸ್ಥೆಯನ್ನು ಮಾಲಿನ್ಯರಹಿತ ಮತ್ತು ಭ್ರಷ್ಟಾಚಾರ ಮುಕ್ತ ಮಾಡಲು ಯತ್ನಿಸಬೇಕೆಂದು ನ್ಯಾಯಮೂರ್ತಿ ಎಸ್ ಎ ನಜೀರ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿದೆ.
ದೂರುದಾರರ ನೇರ ಅಥವಾ ಪ್ರಾಥಮಿಕ ಸಾಕ್ಷ್ಯಾಧಾರಗಳ ಅನುಪಸ್ಥಿತಿಯಲ್ಲಿ, ದೋಷಾರೋಪಣೆಯನ್ನು ನಿರ್ಣಯಿಸಲು ಅವಕಾಶವಿದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠವು ಹೇಳಿದೆ. ಮರಣ ಅಥವಾ ಇತರ ಕಾರಣಗಳಿಂದಾಗಿ ದೂರುದಾರರ ನೇರ ಸಾಕ್ಷ್ಯಗಳು ಲಭ್ಯವಿಲ್ಲದಿದ್ದರೂ, ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸರ್ಕಾರಿ ನೌಕರನೊಬ್ಬನನ್ನು ಅಪರಾಧಿ ಎಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಕ್ರಮ ಲಾಭ ಪಡೆದ ಪ್ರಕರಣದಲ್ಲಿ ದೂರುದಾರನು ಪ್ರತಿಕೂಲವಾಗಿ ತಿರುಗಿದರೆ ಅಥವಾ ಮರಣಹೊಂದಿದ ಸಂದರ್ಭದಲ್ಲಿ ಅಥವಾ ವಿಚಾರಣೆಯ ಸಮಯದಲ್ಲಿ ತನ್ನ ಸಾಕ್ಷ್ಯವನ್ನು ನೀಡಲು ಸಾಧ್ಯವಾಗದಿದ್ದರೆ, ಯಾವುದೇ ಸಾಕ್ಷಿಯ ಸಾಕ್ಷ್ಯವನ್ನು ಮೌಖಿಕವಾಗಿ ಅಥವಾ ದಾಖಲೆಗಳ ಮೂಲಕ ಅಥವಾ ಸಾಂದರ್ಭಿಕ ಸಾಕ್ಷ್ಯದ ಮೂಲಕ ಪ್ರಾಸಿಕ್ಯೂಷನ್ ಸಾಬೀತುಪಡಿಸಲು ಅವಕಾಶವಿದೆ.
ಇಂಥ ಸಂದರ್ಭಗಳಲ್ಲಿ ವಿಚಾರಣೆಯು ಕಡಿಮೆಯಾಗುವುದಿಲ್ಲ ಅಥವಾ ಸರ್ಕಾರಿ ನೌಕರನನ್ನು ಖುಲಾಸೆಗೊಳಿಸುವ ಆದೇಶಕ್ಕೆ ಕಾರಣವಾಗುವುದಿಲ್ಲ ಎಂದು ಪೀಠ ಹೇಳಿದೆ. ಲಂಚದ ಬೇಡಿಕೆಯ ನೇರ ಅಥವಾ ಪ್ರಾಥಮಿಕ ಪುರಾವೆಗಳ ಅನುಪಸ್ಥಿತಿಯಲ್ಲಿ, ಸರ್ಕಾರಿ ನೌಕರನ ತಪ್ಪನ್ನು ಇತರ ಸಾಕ್ಷ್ಯಗಳ ಆಧಾರದ ಮೇಲೆ ನಿರ್ಣಯಿಸಬಹುದೇ ಎಂಬ ವಿಷಯದ ಮೇಲಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ.
ಇದನ್ನೂ ಓದಿ: ಸಾರ್ವಜನಿಕರಿಂದ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ: ಗಸ್ತು ಸಿಬ್ಬಂದಿಗೆ ಹಿರಿಯ ಅಧಿಕಾರಿಗಳ ಖಡಕ್ ಸೂಚನೆ