ಅಲಪ್ಪುಳ(ಕೇರಳ): ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಕೇರಳ ರಾಜ್ಯ ಸಮಿತಿ ಸದಸ್ಯ ಯಾಹ್ಯಾ ತಂಗಳ್ರನ್ನು ಪೊಲೀಸರು ಇಂದು ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ. ಅಲಪ್ಪುಳ ಡಿವೈಎಸ್ಪಿ ನೇತೃತ್ವದ ವಿಶೇಷ ತನಿಖಾ ತಂಡ ತ್ರಿಶೂರ್‌ನಲ್ಲಿ ಆರೋಪಿ ತಂಗಳ್ರನ್ನು ವಶಕ್ಕೆ ತೆಗೆದುಕೊಂಡಿದೆ.
ಇದೇ 21ರಂದು ಅಲಪ್ಪುಳಾದಲ್ಲಿ ನಡೆದ ಪಿಎಫ್‌ಐ ರ್‍ಯಾಲಿಯಲ್ಲಿ ಸಂಘಟನೆಯ ಕಾರ್ಯಕರ್ತನ ಹೆಗಲ ಮೇಲೆ ಕುಳಿತು ಬಾಲಕನೋರ್ವ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮೀಯರ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ. ಇದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಅಂತೆಯೇ ಶುಕ್ರವಾರ ಈ ಘಟನೆಗೆ ಸಂಬಂಧಿಸಿದಂತೆ 18 ಜನರನ್ನು ಪೊಲೀಸರು ಬಂಧಿಸಿದ್ದರು.
ಈ ಕುರಿತಾಗಿ ಶನಿವಾರ ಮಾತನಾಡಿದ್ದ ಪಿಎಫ್‌ಐನ ಕೇರಳ ರಾಜ್ಯ ಸಮಿತಿ ಸದಸ್ಯ ಯಾಹ್ಯಾ ತಂಗಳ್, ಇತ್ತೀಚೆಗಿನ ದಿನಗಳಲ್ಲಿ ನ್ಯಾಯಾಲಯಗಳಿಗೆ ಬಹುಬೇಗನೆ ಆಘಾತ ಉಂಟಾಗುತ್ತಿದೆ. ಅಲಪ್ಪುಳದಲ್ಲಿ ನಡೆದ ರ್‍ಯಾಲಿಯಲ್ಲಿ ಮೊಳಗಿದ ಘೋಷಣೆಗಳನ್ನು ಕೇಳಿ ಹೈಕೋರ್ಟ್ ನ್ಯಾಯಾಧೀಶರಿಗೆ ಆಘಾತವಾಗಿದೆ. ಇದಕ್ಕೇನು ಕಾರಣ ಗೊತ್ತೇ?, ಅವರ ಒಳಉಡುಪು ಕೇಸರಿ. ಒಳಉಡುಪು ಕೇಸರಿಯಾಗಿರುವ ಕಾರಣ ಬೇಗನೆ ಬಿಸಿಯಾಗುತ್ತದೆ. ಅದು ನಿಮಗೆ ಸುಟ್ಟಿರುವ ಅನುಭವ ನೀಡುವುದಲ್ಲದೆ ತೊಂದರೆ ಕೊಡುತ್ತದೆ ಎಂದು ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದ. ಹೀಗಾಗಿ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: 'ಅವರ ಒಳಉಡುಪು ಕೇಸರಿ': ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಪಿಎಫ್‌ಐ ನಾಯಕನ ವಿವಾದಿತ ಹೇಳಿಕೆ