ನವದೆಹಲಿ: ಸರ್ಕಾರಿ ಬಂಗಲೆಯ ಸ್ವಾಧೀನತೆಯನ್ನು ಮುಂದುವರಿಸಲು ಎಸ್ಟೇಟ್ ನಿರ್ದೇಶನಾಲಯಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸುವಂತೆ ಉಚ್ಚಾಟಿತ ಲೋಕಸಭಾ ಸದಸ್ಯೆ ಮತ್ತು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಸೂಚಿಸಿದೆ. ಕೆಲ ಭಿನ್ನ ಸಂದರ್ಭಗಳಲ್ಲಿ ಸರ್ಕಾರಿ ಬಂಗಲೆಯಲ್ಲಿ ಅವಧಿಮೀರಿ ವಾಸಿಸಲು ಅವಕಾಶ ನೀಡಲಾಗಿರುವುದನ್ನು ನ್ಯಾಯಮೂರ್ತಿ ಸುಬ್ರಮಣ್ಯನ್ ಪ್ರಸಾದ್ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
"ಎಸ್ಟೇಟ್ ನಿರ್ದೇಶನಾಲಯದ ಮುಂದೆ ಅರ್ಜಿಯನ್ನು ಸಲ್ಲಿಸಿ ಮತ್ತು ಅಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು" ಎಂದು ನ್ಯಾಯಾಧೀಶರು ಹೇಳಿದರು. ಪ್ರಸ್ತುತ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯವು ಮೊಯಿತ್ರಾಗೆ ಅವಕಾಶ ನೀಡಿತು. ಆದರೆ ಸರ್ಕಾರಿ ಬಂಗಲೆಯಿಂದ ಹೊರಹಾಕುವ ಮುನ್ನ ನಿವಾಸಿಗೆ ನೋಟಿಸ್ ನೀಡುವುದು ಕಡ್ಡಾಯ ಎಂದು ನ್ಯಾಯಾಲಯ ಹೇಳಿತು.
ಕಾನೂನಿನ ಪ್ರಕಾರ ಅರ್ಜಿದಾರರನ್ನು ಹೊರಹಾಕಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಎಸ್ಟೇಟ್ ನಿರ್ದೇಶನಾಲಯದ ಡಿಸೆಂಬರ್ 11 ರ ಆದೇಶವನ್ನು ರದ್ದುಗೊಳಿಸಬೇಕು ಅಥವಾ ಪರ್ಯಾಯವಾಗಿ, 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುವವರೆಗೆ ಸರ್ಕಾರಿ ಬಂಗಲೆಯಲ್ಲಿ ತಮಗೆ ವಾಸಿಸಲು ಅವಕಾಶ ನೀಡಬೇಕು ಎಂದು ಮೊಯಿತ್ರಾ ಅರ್ಜಿಯಲ್ಲಿ ಕೋರಿದ್ದಾರೆ.
ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಿದ ಮತ್ತು ಸಂಸತ್ತಿನ ವೆಬ್ಸೈಟ್ನ ಯೂಸರ್ ಐಡಿ ಮತ್ತು ಪಾಸ್ವರ್ಡ್ಗಳನ್ನು ಅವರೊಂದಿಗೆ ಶೇರ್ ಮಾಡಿಕೊಂಡ ಆರೋಪದ ಮೇಲೆ ಮೊಯಿತ್ರಾ ಅವರ ಕ್ರಮವನ್ನು "ಅನೈತಿಕ ನಡವಳಿಕೆ" ಎಂದು ಪರಿಗಣಿಸಿ ಡಿಸೆಂಬರ್ 8, 2023 ರಂದು ಲೋಕಸಭೆಯಿಂದ ಹೊರಹಾಕಲಾಯಿತು. ತನ್ನನ್ನು ಉಚ್ಚಾಟಿಸಲು ಶಿಫಾರಸು ಮಾಡಿದ ನೈತಿಕ ಸಮಿತಿಯ ವರದಿಯನ್ನು ಲೋಕಸಭೆ ಅಂಗೀಕರಿಸಿದ ನಂತರ ಅವರು ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ತಮ್ಮ ಉಚ್ಛಾಟನೆಯನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ರಾಹುಲ್, ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾ