ಕರೌಲಿ(ರಾಜಸ್ಥಾನ): ರಾಜಸ್ಥಾನದ ಕರೌಲಿ ಜಿಲ್ಲೆಯ ಹಿಂದೌನ್‌ನಲ್ಲಿ ಕಲುಷಿತ ನೀರು ಪೂರೈಕೆಯಾದ ಪರಿಣಾಮ ಇದೇ ನೀರನ್ನು ಕುಡಿದ ನೂರಾರು ಜನರು ಅಸ್ವಸ್ಥಗೊಂಡಿದ್ದಾರೆ.
ಇಲ್ಲಿಯವರೆಗೆ 124 ರೋಗಿಗಳು ಹತ್ತಿರದ ಕಾಲೋನಿಗಳು ಮತ್ತು ಮೊಹಲ್ಲಾಗಳಿಂದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಿರಂತರ ವಾಂತಿ ಭೇದಿಯಿಂದ ರೋಗಿಗಳು ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಜೈಪುರ ಮತ್ತು ಕರೌಲಿ ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
12 ವರ್ಷದ ಬಾಲಕನ ಸಾವು: ಮಾಹಿತಿ ಪ್ರಕಾರ, ಹಿಂದೌನ್ ನಗರದ ಹಲವು ಬಡಾವಣೆಗಳಲ್ಲಿ ಒಂದು ವಾರದಿಂದ ನಲ್ಲಿಗಳಲ್ಲಿ ಗಲೀಜು ನೀರು ಬರುತ್ತಿದ್ದು, ದೂರು ನೀಡಿದರೂ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಜನರು ಆರೋಪಿಸಿದ್ದಾರೆ. ಶಹಗಂಜ್ ನಿವಾಸಿ ದೇವ್ ಕೋಲಿ(12) ಮತ್ತು ದತ್ತಾತ್ರೇಯ ಪದಾ ನಿವಾಸಿ ರತನ್(70) ವಾಂತಿ ಭೇದಿಯಿಂದ ಮೃತಪಟ್ಟಿದ್ದಾರೆ.
ಈ ಘಟನೆಯ ಕುರಿತು ನೀರು ಸರಬರಾಜು ಸಚಿವ ಮಹೇಶ್ ಜೋಶಿ ಅವರು ಅಧಿಕಾರಿಗಳಿಂದ ವಾಸ್ತವ ವರದಿ ಕೇಳಿದ್ದಾರೆ. ಶಹಗಂಜ್, ಚೌಬೆ ಪದಾ, ಖಾಜಿ ಪದಾ, ಕಸಾಯಿಪದಾ, ಬಯಾನಿಯಾಪದಾ ಹೀಗೆ ಹತ್ತಾರು ಬಡಾವಣೆಗಳಲ್ಲಿ 4 ದಿನಗಳಿಂದ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಬರುತ್ತಿದ್ದಾರೆ.
ವಿಷಯ ತಿಳಿದ ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಹಿಂದೌನ್ ಆಸ್ಪತ್ರೆಗೆ ಆಗಮಿಸಿ ರೋಗಿಗಳ ಆರೋಗ್ಯ ವಿಚಾರಿಸಿದ್ದು, ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಇದೇ ವೇಳೆ ಸ್ಯಾಂಪಲ್ ತೆಗೆದುಕೊಂಡು ತನಿಖೆ ನಡೆಸುವಂತೆ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೂಡಾ ನೀಡಿದ್ದಾರೆ.
ಇದನ್ನೂ ಓದಿ:ಮದುವೆ ಮಂಟಪಗಳೆದುರು ಪೊಲೀಸ್ ಚೆಕ್‌ಪೋಸ್ಟ್; ಕುಡಿದು ವಾಹನ ಹತ್ತಿದ್ರೆ ಇಲ್ಲಿ ದಂಡ!