ಸೇಲಂ (ತಮಿಳುನಾಡು): ಒಂದೂವರೆ ದಶಕಗಳ ಹಿಂದೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಮೇಲ್ಚಾಟ್ ವಸ್ತ್ರಂ ಸೇವೆಗೆ ನೋಂದಣಿ ಮಾಡಿದ್ದರೂ ಅವಕಾಶ ಮಾಡಿಕೊಡದ ಟಿಟಿಡಿ ವಿರುದ್ಧ ವ್ಯಕ್ತಿಯೊಬ್ಬರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದು, ಸೇವೆಗೆ ಇದೇ ವರ್ಷದಲ್ಲಿ ಅನುಮತಿಸಲು ಕೋರ್ಟ್ ಸೂಚಿಸಿದೆ. ತಪ್ಪಿದಲ್ಲಿ 45 ಲಕ್ಷ ರೂಪಾಯಿ ಪಾವತಿಸುವಂತೆ ಎಚ್ಚರಿಕೆ ನೀಡಿದೆ.
16 ವರ್ಷಗಳ ಹಿಂದೆ ಅಂದರೆ 2006 ರಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯ ಭಾಸ್ಕರ್ ಎಂಬುವವರು 12,250 ರೂಪಾಯಿ ನೀಡಿ ಮೇಲ್ಚಾಟ್ ವಸ್ತ್ರಂ ಸೇವೆಗೆ ನೋಂದಣಿ ಮಾಡಿಕೊಂಡಿದ್ದರು. 14 ವರ್ಷದ ಬಳಿಕ ಅವರಿಗೆ ಅಂದರೆ 2020 ರ ಜುಲೈ 10 ರಂದು ಸೇವೆಗೆ ಅನುಮತಿ ನೀಡಲಾಗಿತ್ತು. ಆದರೆ, ಈ ವೇಳೆ ಕೊರೊನಾ ವಕ್ಕರಿಸಿದ ಕಾರಣ ಅದನ್ನೂ ಕೂಡ ವಜಾ ಮಾಡಲಾಗಿತ್ತು.
ಇದಾದ ಬಳಿಕ ಭಾಸ್ಕರ್ ಅವರಿಗೆ ಸೇವೆಗಾಗಿ ಅನುಮತಿಯನ್ನೇ ನೀಡಿಲ್ಲ. ನೋಂದಣಿ ಹಣ ವಾಪಸ್ ನೀಡದ ಟಿಟಿಡಿ ಮತ್ತು ಇಷ್ಟು ದಿನ ತಮ್ಮನ್ನು ಕಾಯಿಸಿ ಸತಾಯಿಸಿದ ಕಾರಣಕ್ಕಾಗಿ ಗ್ರಾಹಕ ಸೇವಾ ನ್ಯಾಯಾಲಯಕ್ಕೆ ಭಾಸ್ಕರ್ ದೂರು ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಟಿಟಿಡಿಯ ನಡೆ ಭಕ್ತರ ಮನಸ್ಸಿಗೆ ಘಾಸಿ ಮಾಡಿದೆ. ಇದು ಮಾನಸಿಕ ಹಿಂಸೆಗೆ ಸಮ. ಶೀಘ್ರವೇ ಭಕ್ತರಿಗೆ ಸೇವೆ ಸಲ್ಲಿಸಲು ದಿನಾಂಕ ನಿಗದಿ ಮಾಡಲು ದೇವಾಲಯದ ಅಧಿಕಾರಿಗಳಿಗೆ ಸೂಚಿಸಿತು. ಈ ವರ್ಷದೊಳಗೆ ಸೇವೆಗೆ ಅವಕಾಶ ನೀಡದಿದ್ದಲ್ಲಿ ಟಿಟಿಡಿ 45 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಭಕ್ತರಿಗೆ ಪಾವತಿಸಬೇಕಾಗುತ್ತದೆ ಎಂದೂ ತಿಳಿಸಿದೆ.
ಓದಿ: ವಿಮಾನದ ಮೂಲಕ ವಿದೇಶಿ ಕರೆನ್ಸಿ ಕಳ್ಳಸಾಗಣೆ.. ಇಬ್ಬರು ಪ್ರಯಾಣಿಕರ ಬಂಧನ