ಜೋಧಪುರ: ಹತ್ತಿರದ ಕಾಂಕಾಣಿ ಗ್ರಾಮದಲ್ಲಿ ಕಪ್ಪು ಜಿಂಕೆಯ ಸ್ಮಾರಕವೊಂದನ್ನು ನಿರ್ಮಿಸಲಾಗುತ್ತಿದೆ. ಈ ಕಪ್ಪು ಜಿಂಕೆಗಳನ್ನು ಕೃಷ್ಣಮೃಗ ಅಥವಾ ಚಿಂಕಾರಾ ಎಂದೂ ಕರೆಯಲಾಗುತ್ತದೆ. ಸ್ಮಾರಕಕ್ಕಾಗಿ ಇವುಗಳ ಮೂರ್ತಿಯನ್ನು ಕೂಡ ಈಗಾಗಲೇ ತಯಾರಿಸಲಾಗಿದೆ. ಆದರೆ ಇಲ್ಲಿ ನಿರ್ಮಿಸಲಾಗುತ್ತಿರುವ ಜಿಂಕೆ ಸ್ಮಾರಕಕ್ಕೆ ಒಂದು ವಿಶೇಷವಿದೆ.
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಜಿಂಕೆಗಳನ್ನು ಬೇಟೆಯಾಡಿದ್ದು, ದೂರು ದಾಖಲಾಗಿದ್ದು, ಕೋರ್ಟ್ ಕೇಸ್ನಲ್ಲಿ ಅಲೆದಾಡಿದ್ದು ನಿಮಗೆ ನೆನಪಿರಬಹುದು. 1998ರಲ್ಲಿ ಸಲ್ಮಾನ್ ಖಾನ್ ಬೇಟೆಯಿಂದ ಮೃತಪಟ್ಟ ಜಿಂಕೆಗಳನ್ನು ಸಮಾಧಿ ಮಾಡಲಾದ ಸ್ಥಳದಲ್ಲೇ ಈ ಸ್ಮಾರಕ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ.
ಸ್ಮಾರಕ ನಿರ್ಮಾಣ ಕಾಮಗಾರಿಯ ಉಸ್ತುವಾರಿಯಲ್ಲೊಬ್ಬರಾದ ಪ್ರೇಮಾರಾಮ ಸಾರಣ ಮಾತನಾಡಿದ್ದು, "ಮುಂದಿನ ಹದಿನೈದರಿಂದ ಇಪ್ಪತ್ತು ದಿಗಳೊಳಗೆ ಕೆಲಸ ಪೂರ್ಣವಾಗಲಿದೆ. ಜೋಧಪುರದ ಮೂರ್ತಿಕಾರ ಶಂಕರ ಎಂಬುವರು ಮೂರ್ತಿ ತಯಾರಿಸಿದ್ದಾರೆ. ಕಪ್ಪು ಜಿಂಕೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ, ಜನರಲ್ಲಿ ಬೇಟೆಯಾಡುವ ಪ್ರವೃತ್ತಿಯನ್ನು ತೊಡೆದುಹಾಕುವ ಉದ್ದೇಶದಿಂದ ಸ್ಮಾರಕ ನಿರ್ಮಿಸಲಾಗುತ್ತಿದೆ. ಈ ಹಿಂದೆ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಿಂಕೆಗಳು ಕಾಣಿಸುತ್ತಿದ್ದವು. ಆದರೆ ಬೇಟೆಯಾಡುವುದರಿಂದ ಹಾಗೂ ಅದನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳದ ಕಾರಣದಿಂದ ಅವುಗಳ ಸಂಖ್ಯೆ ಈಗ ವಿರಳವಾಗಿದೆ. ಕೃಷ್ಣಮೃಗ ಸ್ಮಾರಕ ಸುಮಾರು 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ" ಎಂದು ಮಾಹಿತಿ ನೀಡಿದರು.
ಹಮ್ ಸಾಥ್ ಸಾಥ್ ಹೈ ಸಿನಿಮಾ ಶೂಟಿಂಗ್ ವೇಳೆ ಬೇಟೆ: 1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಲನಚಿತ್ರ ಚಿತ್ರೀಕರಣಕ್ಕಾಗಿ ಸಲ್ಮಾನ್ ಖಾನ್ ಇಲ್ಲಿಗೆ ಆಗಮಿಸಿದ್ದರು. ಆಗ ನಡೆದ ಬೇಟೆ ಪ್ರಕರಣಗಳಲ್ಲಿ ಸಲ್ಮಾನ್ ಖಾನ್ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಜೋಧಪುರದ ಘೋಡಾ ಫಾರ್ಮ್ ಹೌಸ್ ಮತ್ತು ಭವಾದ್ ಗ್ರಾಮದಲ್ಲಿ 1998ರ ಸೆಪ್ಟೆಂಬರ್ 27-28 ರಂದು ಮತ್ತು ಕಾಂಕಾಣಿ ಗ್ರಾಮದಲ್ಲಿ ಅಕ್ಟೋಬರ್ 1ರ ರಾತ್ರಿ ಒಟ್ಟು ಎರಡು ಜಿಂಕೆಗಳನ್ನು ಬೇಟೆಯಾಡಿ ಕೊಂದಿದ್ದರು ಎಂಬ ಆರೋಪ ಹೊರಿಸಲಾಗಿತ್ತು. ಇದರ ನಂತರ ಸಲ್ಮಾನ್ ಖಾನ್ ಬಂಧಿಸಲ್ಪಟ್ಟಿದ್ದರು. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ರಿಗೆ ಮಾತ್ರ 5 ವರ್ಷದ ಶಿಕ್ಷೆಯಾಗಿತ್ತು. ಉಳಿದೆಲ್ಲರೂ ಆರೋಪದಿಂದ ಖುಲಾಸೆಯಾಗಿದ್ದರು. ಸೋನಾಲಿ ಬೇಂದ್ರೆ ಮತ್ತು ನೀಲಂ ಅವರನ್ನು ಅದೆಷ್ಟೋ ವರ್ಷಗಳ ನಂತರ ಸಾಕ್ಷಿಗಳು ಗುರುತಿಸಲು ವಿಫಲರಾಗಿದ್ದರು.