ರಾಯ್‌ಪುರ (ಛತ್ತೀಸ್‌ಗಢ): ಪಕ್ಷ ಸಂಘಟನೆಯ ಎಲ್ಲಾ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಇತರೆ ಹಿಂದುಳಿದ ವರ್ಗಗಳು (ಒಬಿಸಿ), ಮಹಿಳೆಯರು, ಯುವಕರು ಹಾಗೂ ಅಲ್ಪಸಂಖ್ಯಾತರಿಗೆ ಶೇ.50 ರಷ್ಟು ಮೀಸಲಾತಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಶನಿವಾರ ರಾಯ್‌ಪುರದಲ್ಲಿ ನಡೆದ 85ನೇ ಸರ್ವಸದಸ್ಯರ ಅಧಿವೇಶನದಲ್ಲಿ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ಮಹತ್ವದ ನಿರ್ಧಾರವು ಸಾಮಾಜಿಕ ನ್ಯಾಯದ ಹೊಸ ಅಧ್ಯಾಯಕ್ಕೆ ನಾಂದಿಯಾಗಲಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಕಾಂಗ್ರೆಸ್‌ನ ಹೇಳಿಕೆಯ ಪ್ರಕಾರ, ಉದಯಪುರ ಚಿಂತನಾ ಶಿಬಿರದಲ್ಲಿ ಪ್ರತಿಪಾದಿಸಲಾದ '50-50' ಪರಿಕಲ್ಪನೆಯನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ. ಪಕ್ಷವು ತನ್ನ ಸಂವಿಧಾನದಲ್ಲಿ ಒಟ್ಟು 85 ತಿದ್ದುಪಡಿಗಳನ್ನು ಮಾಡಿದೆ. ಹೀಗೆ ತಿದ್ದುಪಡಿಯಾದ ಸಂವಿಧಾನದ ಪ್ರಕಾರ, ಜನವರಿ 1, 2025 ರಿಂದ ಡಿಜಿಟಲ್ ಸದಸ್ಯತ್ವವನ್ನು ಮಾತ್ರ ಕಾಂಗ್ರೆಸ್ ಹೊಂದಿರುತ್ತದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರ ಸಂಖ್ಯೆ ಹಿಂದಿನ 23 ರಿಂದ 35ಕ್ಕೆ ಏರಿಕೆಯಾಗಲಿದೆ. ಇದರಲ್ಲಿ 18 ಸದಸ್ಯರು ಚುನಾಯಿತರಾಗುತ್ತಾರೆ. 17 ಮಂದಿ ನಾಮನಿರ್ದೇಶನಗೊಳ್ಳುತ್ತಾರೆ. ಇನ್ನುಳಿದಂತೆ, ಅಪರಾಧಗಳ ವಿರುದ್ಧ ಕಾನೂನು ಜಾರಿ, ಉಚಿತ ಆರೋಗ್ಯ, ನಾಗರಿಕರ ಹಕ್ಕುಗಳ ರಕ್ಷಣೆ ಮತ್ತು ಜಮ್ಮು-ಕಾಶ್ಮೀರದ ರಾಜ್ಯತ್ವ ಮರುಸ್ಥಾಪಿಸುವುದು ಅಧಿವೇಶನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳಾಗಿವೆ.
ಕೇಂದ್ರೀಯ ತನಿಖಾ ಸಂಸ್ಥೆಗಳಾದ ಇಡಿ, ಎನ್‌ಐಎ, ಸಿಬಿಐ ಮತ್ತು ಐಟಿಯನ್ನು ಬಿಜೆಪಿಯು ರಾಜಕೀಯ ವಿರೋಧಿಗಳನ್ನು ಹೆದರಿಸಲು ದುರುಪಯೋಗಪಡಿಸಿಕೊಂಡಿದೆ ಎಂದು ಕೈ ಪಕ್ಷ ಆರೋಪಿಸಿದೆ. ಮುಂಬರುವ ಚುನಾವಣೆಗಾಗಿ ಸಮಾನ ಮನಸ್ಕ ಜಾತ್ಯತೀತ ಶಕ್ತಿಗಳನ್ನು ಗುರುತಿಸಲು ಮತ್ತು ಒಟ್ಟುಗೂಡಿಸಲು ಯೋಜನೆ ರೂಪಿಸಿದೆ. ನಿರುದ್ಯೋಗ, ಬಡತನ ನಿರ್ಮೂಲನೆ, ಹಣದುಬ್ಬರ, ಮಹಿಳಾ ಸಬಲೀಕರಣ, ಉದ್ಯೋಗ ಸೃಷ್ಟಿ, ರಾಷ್ಟ್ರೀಯ ಭದ್ರತೆಯ ಸಮಸ್ಯೆಗಳನ್ನು ಒಳಗೊಳ್ಳುವ ಅತಿದೊಡ್ಡ ಸಾಮೂಹಿಕ ಸಂಪರ್ಕ ಕಾರ್ಯಕ್ರಮ ಅನುಸರಿಸಿ 2024ಕ್ಕೆ ಕಾಂಗ್ರೆಸ್ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುತ್ತದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಪೈಪೋಟಿ ಇಲ್ಲ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆ ಉಲ್ಲೇಖಿಸಿರುವ ಕಾಂಗ್ರೆಸ್, ಈ ಸವಾಲು ಸ್ವಾಗತಿಸುವುದಾಗಿ ಹೇಳಿದೆ. ಬಿಜೆಪಿಗೆ ಸ್ಪರ್ಧಿಗಳೇ ಇಲ್ಲ ಎಂದು ಹೇಳುವ ಮೂಲಕ ಬಿಜೆಪಿ ನಾಯಕರು ದುರಹಂಕಾರದ ಪರಾಕಾಷ್ಠೆ ತಲುಪಿರುವುದು ಆಘಾತಕಾರಿ. ಇದು ಕಾಂಗ್ರೆಸ್ ಮತ್ತಿತರ ಪಕ್ಷಗಳಿಗೆ ಮಾತ್ರವಲ್ಲ, ಭಾರತದ ಪ್ರಜಾಪ್ರಭುತ್ವದ ನೈತಿಕತೆಗೆ ದೊಡ್ಡ ಸವಾಲು ಎಂದು ಹೇಳಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಕೊನೆಗೊಂಡಿದ್ದಕ್ಕೆ ಸಂತೋಷ: ನಿವೃತ್ತಿ ಸುಳಿವು ಕೊಟ್ರಾ ಸೋನಿಯಾ?