ನವದೆಹಲಿ: ದೇಶೀಯ ಅಡುಗೆ ಅನಿಲದ ಬೆಲೆ ಏರಿಕೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಇದನ್ನು "ಮಹಿಳಾ ವಿರೋಧಿ" ಕ್ರಮವೆಂದು ಆರೋಪಿಸಿದೆ. ಬೆಲೆ ಏರಿಕೆಯನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿತು. ಮಂಗಳವಾರ ಎಲ್‌ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 25 ರೂ. ಹೆಚ್ಚಿಸಲಾಗಿದೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನಾತೆ, "ಎಲ್‌ಪಿಜಿ ಬೆಲೆ ಏರಿಕೆ ನಿರ್ಧಾರವು ಸರ್ಕಾರದ ಮಹಿಳಾ ವಿರೋಧಿ ಸಿದ್ಧಾಂತದ ಪ್ರತಿಬಿಂಬವಾಗಿದೆ. ಹೆಚ್ಚಿನ ಬೆಲೆಗಳು ಮಹಿಳೆಯರಿಗೆ ಸಗಣಿ ಮತ್ತು ಉರುವಲಿಗೆ ಹಿಂತಿರುಗಲು ಒತ್ತಾಯಿಸುತ್ತದೆ. ಇದು ಮಹಿಳೆಯರಿಗೆ ಆರೋಗ್ಯಕ್ಕೆ ಒಳ್ಳೆಯದಲ್ಲ.
ರಾಷ್ಟ್ರವು ಆರ್ಥಿಕ ಸಂಕಷ್ಟ, ನಿರುದ್ಯೋಗವನ್ನು ನೋಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರವು ಎಲ್‌ಪಿಜಿ ಬೆಲೆ ಹೆಚ್ಚಿಸುತ್ತಿದೆ. ಈ ಸರ್ಕಾರವು ಬೆಲೆಗಳನ್ನು ಕಡಿಮೆ ಮಾಡಲು ಯಾವ ಪ್ರಯತ್ನವನ್ನೂ ಪಡುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಪ್ರಧಾನ ಮಂತ್ರಿ ಉಜ್ಜಲ ಯೋಜನೆ ಬಗ್ಗೆ ಪ್ರಶ್ನಿಸಿದ ಅವರು, ನೀವು ಎಷ್ಟು ಜನರಿಗೆ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದ್ದೀರಿ? ನಿಜವಾಗಿ 860 ರೂ.ಗಳಲ್ಲಿ ಸಿಲಿಂಡರ್ ಖರೀದಿಸಬಹುದಾ? ಎಂದರು.
ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಮಾತನಾಡಿ, "ಈ ಹಣದುಬ್ಬರ ಮತ್ತು ನಿರುದ್ಯೋಗದಿಂದಾಗಿ ಅವರ ತಟ್ಟೆಗಳು ಖಾಲಿಯಾಗಿವೆ ಎಂದು ಪ್ರಧಾನಿಗೆ ಸಂದೇಶ ನೀಡಬೇಕು. ಅದಕ್ಕಾಗಿ ಈ ದೇಶದ ಎಲ್ಲ ಮಹಿಳೆಯರು ಮನೆಯಿಂದ ಹೊರಬಂದು ತಟ್ಟೆ ಬಾರಿಸಬೇಕು ಎಂದು ಹೇಳಿದರು. ಅಲ್ಲದೇ, ಬೆಲೆ ಏರಿಕೆಯ ನಿರ್ಧಾರವನ್ನು ಸರ್ಕಾರ ತಕ್ಷಣವೇ ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತು. ಬೆಲೆ ಏರಿಕೆಯ ನಂತರ, ಎಲ್‌ಪಿಜಿ ಸಿಲಿಂಡರ್‌ಗಳು ದೆಹಲಿಯಲ್ಲಿ 860 ರೂ., ಕೋಲ್ಕತ್ತಾದಲ್ಲಿ 886 ರೂ., ಮುಂಬೈನಲ್ಲಿ 860 ರೂ. ಮತ್ತು ಚೆನ್ನೈನಲ್ಲಿ 875 ರೂ. ಆಗಿದೆ.
ಓದಿ: ಪ್ರಧಾನಿ ಎದುರು ಕ್ರೀಡಾ ಅಕಾಡೆಮಿ, ತರಬೇತಿ ಶಾಲೆ ಆರಂಭಿಸುವ ಇಂಗಿತ ವ್ಯಕ್ತಪಡಿಸಿದ ಪಿ ವಿ ಸಿಂಧು