ನವದೆಹಲಿ: ಪ್ರತಿ ಡಾಲರ್‌ಗೆ ಭಾರತದ ಕರೆನ್ಸಿ ಮೌಲ್ಯಯು ದಾಖಲೆ ಮಟ್ಟಕ್ಕೆ ಕುಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶುಕ್ರವಾರ ವಾಗ್ದಾಳಿ ನಡೆಸಿದೆ.
ರೂಪಾಯಿಯು ಒಂದು ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 82.33ಕ್ಕೆ ಕುಸಿತ ಕಂಡಿದೆ. ಈ ವರ್ಷದ ಆರಂಭದಿಂದ 100 ಶತಕೋಟಿ ಡಾಲರ್‌ಗಳ ಮೌಲ್ಯದ ಫಾರೆಕ್ಸ್ ಮೀಸಲು ಕಡಿಮೆಯಾಗಿದೆ. ಚಾಲ್ತಿ ಖಾತೆ ಕೊರತೆ ಮತ್ತು ವಿತ್ತೀಯ ಕೊರತೆಯ ಸಮಸ್ಯೆಗಳು ದೊಡ್ಡದಾಗಿವೆ. ಒಂದು ವರ್ಷದ ಅವಧಿಯಲ್ಲಿ ವ್ಯಾಪಾರದ ಕೊರತೆ ದ್ವಿಗುಣಗೊಂಡಿದೆ. ರಫ್ತುಗಳು ಸುಮಾರು 3.5 ಪ್ರತಿಶತದಷ್ಟು, FMCG ಮಾರಾಟವು 10 ಪ್ರತಿಶತದಷ್ಟು ಕಡಿಮೆಯಾಗಿದೆ. ಇದು ಹೂಡಿಕೆಯನ್ನು ಮತ್ತಷ್ಟು ನಿಧಾನಗೊಳಿಸಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿಹೋಗಿ ನಿರುದ್ಯೋಗವು ಹೆಚ್ಚುತ್ತಿದೆ. ಇದೆಲ್ಲವೂ ಬಡವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿವೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇಟ್ ಹೇಳಿದ್ದಾರೆ.
ಹೆಚ್ಚಿನ ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ಮತ್ತು ಸಂಸ್ಥೆಗಳು ಭಾರತೀಯ ಆರ್ಥಿಕತೆಯ ಪ್ರಕ್ಷೇಪಗಳನ್ನು ಕೆಳಮಟ್ಟಕ್ಕಿಳಿಸಿವೆ. ಈ ವರ್ಷ ಮೂರನೇ ಬಾರಿಗೆ ಭಾರತದ ಅಂದಾಜು GDP ಬೆಳವಣಿಗೆ ದರವನ್ನು ಕಡಿಮೆ ಮಾಡುವ ವಿಶ್ವ ಬ್ಯಾಂಕ್ ನಿರ್ಧಾರ ಇದರಿಂದ ಹೊರತಾಗಿಲ್ಲ. ಮೂಡೀಸ್, ಫಿಚ್ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗಳು ಇತರ ಬ್ಯಾಂಕ್ಗಳಂತೆ ಇದೇ ರೀತಿ ಮುನ್ಸೂಚನೆಯನ್ನು ಕಡಿತಗೊಳಿಸಿವೆ. ಆದರೆ ಸರ್ಕಾರ ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಶ್ರಿನೇಟ್ ದೂರಿದರು.
ವಿಶ್ವಬ್ಯಾಂಕ್‌ನ ವರದಿಯು ಪ್ರಕಾರ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೇಶದಲ್ಲಿ ಸುಮಾರು 5.6 ಕೋಟಿ ಜನರು ತೀವ್ರ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ವಿಶ್ವ ಬ್ಯಾಂಕ್ ಮೂರನೇ ಬಾರಿಗೆ ಭಾರತದ ಅಂದಾಜು ಜಿಡಿಪಿ ಬೆಳವಣಿಗೆಯನ್ನು 7.5 ಪ್ರತಿಶತದಿಂದ 6.5 ಪ್ರತಿಶತಕ್ಕೆ ಕಡಿತಗೊಳಿಸಿದೆ. ಇದು ಹೆಚ್ಚಿನ ನಿರುದ್ಯೋಗ ಮತ್ತು ಹೆಚ್ಚು ಬಡತನ ಬಂದಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷವು ಆರ್ಥಿಕ ಪರಿಸ್ಥಿತಿ ಬಗ್ಗೆ ದೀರ್ಘಕಾಲದಿಂದ ಹೇಳುತ್ತಲೇ ಬಂದಿದೆ. ಆದರೆ, ಸರ್ಕಾರವು ಸಮಸ್ಯೆಯನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಲಿಲ್ಲ. ಬಡತನ ಹೆಚ್ಚುತ್ತಿರುವ ಆತಂಕದಿಂದಾಗಿಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಪಿಎಂ ಮೋದಿ ಮತ್ತು ಅವರ ಸರ್ಕಾರಕ್ಕೆ ಬಡವರಿಗೆ ನೇರವಾಗಿ ಹಣವನ್ನು ವರ್ಗಾಹಿಸುವ ಸಲಹೆ ನೀಡಿದ್ದರು. ಕಾಂಗ್ರೆಸ್ ಪಕ್ಷ ನೀಡಿದ ಸಲಹೆಗಳಿಗೆ ಕಿವಿಗೊಟ್ಟಿದ್ದರೆ ಆರ್ಥಿಕ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ. ಲಕ್ಷಾಂತರ ದಿನಗೂಲಿ ಕಾರ್ಮಿಕರು ಮನೆಯಲ್ಲೇ ಕೂರುವ ಪರಿಸ್ಥಿತಿ ಬರುತ್ತಿರಲಿಲ್ಲ. ಲಕ್ಷಗಟ್ಟಲೆ ಎಂಎಸ್‌ಎಂಇಗಳು ಮುಚ್ಚಬೇಕಾಗುತ್ತಿರಲಿಲ್ಲ. ಸುಮಾರು 6 ಕೋಟಿ ಜನರು ಕಡು ಬಡತನಕ್ಕೆ ತಳ್ಳಲ್ಪಡುತ್ತಿರಲಿಲ್ಲ ಎಂದರು.
ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ: ಸೆನ್ಸೆಕ್ಸ್ ಏರಿಕೆ