ನವದೆಹಲಿ: ಕಳೆದ 8 ವರ್ಷಗಳಿಂದ ಕೇಂದ್ರದ ಬಿಜೆಪಿ ಸರ್ಕಾರ ಭಾರತ್ ತೋಡೋ ಯಾತ್ರೆಯನ್ನು ನಡೆಸುತ್ತಿದೆ. 10 ದಿನಗಳಿಂದ ನಾವು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಬಗ್ಗೆ ಕೇಸರಿ ಪಡೆ ಭಾರೀ ಆತಂಕಕ್ಕೀಡಾಗಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಭಾರತ್ ಜೋಡೋ ಯಾತ್ರೆಯ ಯಶಸ್ಸಿನಿಂದಾಗಿ ಬಿಜೆಪಿಯ ಸುಳ್ಳಿನ ಕಾರ್ಖಾನೆಯು ಕಾಂಗ್ರೆಸ್ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಗುರಿಯಾಗಿಸಿದೆ. ನಮ್ಮ ವಿರುದ್ಧ ಅಧಿಕಾರಿಗಳನ್ನು ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿಯನ್ನು ಯಾವ್ಯಾವುದೋ ವಿಚಾರಕ್ಕಾಗಿ ಬಿಜೆಪಿ ಅಪಖ್ಯಾತಿಗೊಳಿಸಲು ಮಾಡಿರುವ ವಿವಿಧ ಸುಳ್ಳು ಆರೋಪಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಪ್ರಿಯಾಂಕಾ ಗಾಂಧಿ ಅವರ ವಿರುದ್ಧ ನೀಡಿರುವ ಅಸಭ್ಯ ಹೇಳಿಕೆಯನ್ನು ಖಂಡಿಸಿದೆ.
ಬಿಜೆಪಿ ನಾಯಕರು ಪ್ರಿಯಾಂಕಾ ಗಾಂಧಿ ವಾದ್ರಾರ ಬಗ್ಗೆ ಅಸಭ್ಯ ಟ್ವೀಟ್ ಮಾಡಿ ನಂತರ ಅಳಿಸಿ ಹಾಕಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಕೇಳಬೇಕು. ಪಕ್ಷದಿಂದ ಆ ನಾಯಕನನ್ನು ವಜಾಗೊಳಿಸಬೇಕು ಕಾಂಗ್ರೆಸ್ ಆಗ್ರಹಿಸಿದೆ.
ತಮ್ಮದೇ ಪಕ್ಷದ ನಾಯಕರು ಭಾರತ್ ಜೋಡೋ ಯಾತ್ರೆಯ ವಿರುದ್ಧ ಕೆಟ್ಟದಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಗೊತ್ತಿದ್ದರೂ ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅವುರು ನಾಯಕರನ್ನು ತಡೆಯುವ ಯತ್ನ ಮಾಡಿಲ್ಲ. ಅಂದರೆ ಇದಕ್ಕೆ ಅವರ ಸಹಮತ ಇದೆ ಎಂದು ತೋರುತ್ತಿದೆ ಎಂದು ಆಪಾದಿಸಿದರು.
ದೇಶವನ್ನು ಕಟ್ಟಲು ಮಾಡಲಾಗುತ್ತಿರುವ ಯಾತ್ರೆಯಲ್ಲಿ ಬಿಡುವಿಲ್ಲದ ಪ್ರಧಾನಿ ಮತ್ತು ಗೃಹ ಸಚಿವರು ಭಾಗವಹಿಸಲಿ. ಆಗಲಾದರೂ ಅವರ ಮನಸ್ಸು ಶುದ್ಧವಾದೀತು ಎಂದು ವ್ಯಂಗ್ಯ ಮಾಡಲಾಗಿದೆ.
10 ದಿನದಲ್ಲಿ 200 ಕಿಲೋ ಮೀಟರ್ ಭಾರತ್ ಜೋಡೋ ಯಾತ್ರೆ ನಡೆದಿದೆ. ಇಷ್ಟಕ್ಕೆಲ್ಲಾ ಬಿಜೆಪಿ ನಾಯಕರು ಪದರುಗುಟ್ಟಿದ್ದಾರೆ. ಉಳಿದ 3300 ಕಿಮೀ ಯಾತ್ರೆಯನ್ನು ಹೇಗೆ ತಡೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಗೇಲಿ ಮಾಡಿದೆ.