ನವದೆಹಲಿ: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರುವ ಕನಸು ಕಂಡಿದ್ದ ಕಾಂಗ್ರೆಸ್ಗೆ, ಬಿಜೆಪಿ ಭಾರೀ ಆಘಾತ ನೀಡಿತ್ತು. ಇದು ಪಕ್ಷದ ನಾಯಕ ಕಮಲ್ನಾಥ್ ತಲೆದಂಡಕ್ಕೆ ಕಾರಣವಾಗಿದೆ. ಪಕ್ಷದ ಹೀನಾಯ ಸೋಲಿನ ಕಾರಣ ಕಮಲ್ ನಾಥ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿ, ಅವರ ಸ್ಥಾನಕ್ಕೆ ಜಿತೇಂದ್ರ ಪಟ್ವಾರಿ ಅವರನ್ನು ಶನಿವಾರ ನೇಮಿಸಿ ಆದೇಶಿಸಿದೆ.
ಮಾಜಿ ಸಿಎಂ ಕಮಲನಾಥ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ವಿಧಾನಸಭೆ ಚುನಾವಣೆಯನ್ನು ಎದುರಿಸಿತ್ತು. ರಾಜ್ಯದಲ್ಲಿ ಬಿಜೆಪಿ ವಿರುದ್ಧ ತಂತ್ರಗಾರಿಕೆ ಮಾಡುವ ವಿಚಾರದಲ್ಲಿ ಕಮಲನಾಥ್ ಏಕಸ್ವಾಮ್ಯ ಕೂಡ ಸಾಧಿಸಿದ್ದರು. ಇದು ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವೂ ಆಗಿತ್ತು. ಜೊತೆಗೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದು, ನಾಥ್ ಅವರ ಸ್ಥಾನಕ್ಕೆ ಕುತ್ತು ತಂದಿದೆ.
ಸೋಲಿನ ಬೆನ್ನಲ್ಲೇ ಕಮಲನಾಥ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯ ಕೇಳಿಬಂದಿತ್ತು. ಅದರಂತೆ ಮಾಜಿ ಸಿಎಂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಹಿರಿಯ ನಾಯಕ ಜಿತೇಂದ್ರ ಪಟ್ವಾರಿ ಅವರನ್ನು ನೇಮಿಸಲಾಗಿದೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಜಿತು ಪಟ್ವಾರಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ನಿರ್ಗಮಿತ ಅಧ್ಯಕ್ಷ ಕಮಲ್ ನಾಥ್ ಅವರ ಕೊಡುಗೆಗಳನ್ನು ಪಕ್ಷವು ಪ್ರಶಂಸಿಸುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಜೊತೆಗೆ ಉಮಂಗ್ ಸಿಂಘರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ಹೇಮಂತ್ ಕಟಾರೆ ಅವರನ್ನು ಉಪ ನಾಯಕರನ್ನಾಗಿ ನೇಮಿಸಲಾಗಿದೆ.
ಜಿತು ಪಟ್ವಾರಿ ಯಾರು?: 50 ವರ್ಷದ ಪಟ್ವಾರಿ ಅವರು ಬಿಜೆಪಿಯ ಮಧು ವರ್ಮಾ ವಿರುದ್ಧ 35 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಪಟ್ವಾರಿ ಅವರು 2013 ರಲ್ಲಿ ರಾವು ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. 2018 ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾದರು. ಪಟ್ವಾರಿ ಅವರು ಮಧ್ಯಪ್ರದೇಶ ಯುವ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನವನ್ನೂ ವಹಿಸಿಕೊಂಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರು ಸಂಘಟಿಸುವ ನಿಟ್ಟಿನಲ್ಲಿ ಪಟ್ವಾರಿ ಅವರನ್ನು ಇದೀಗ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಮಲ್ ನಾಥ್ ಸರ್ಕಾರದಲ್ಲಿ ಉನ್ನತ ಶಿಕ್ಷಣ, ಕ್ರೀಡೆ ಮತ್ತು ಯುವ ವ್ಯವಹಾರಗಳ ಇಲಾಖೆ ಸಚಿವರಾಗಿಯೂ ಪಟ್ವಾರಿ ಅವರು ಸೇವೆ ಸಲ್ಲಿಸಿದ್ದಾರೆ.
ಇದನ್ನು ಓದಿ:ಕಾಂಗ್ರೆಸ್ ಸರ್ಕಾರದ ನಡೆ.. 5ನೇ ಗ್ಯಾರಂಟಿ ಯುವ ನಿಧಿ ಅನುಷ್ಠಾನದ ಕಡೆಗೆ: ರಣದೀಪ್ ಸಿಂಗ್ ಸುರ್ಜೇವಾಲ